ಬೆಂಗಳೂರು:- ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿಟಿ ರವಿ-ಯತ್ನಾಳ್ ವಿರುದ್ದ ದಾಖಲಾದ ಎಫ್ಐಆರ್ ಸಮರ್ಥಿಸಿಕೊಂಡಿದ್ದಾರೆ. ಮದ್ದೂರು ಘಟನೆಯ ವಿಚಾರದಲ್ಲಿ ನಾವು ಮೊದಲಿಂದ ಹೇಳುತ್ತಿದ್ದೇವೆ. ಇದರಲ್ಲಿ ರಾಜಕೀಯ ಮಾಡಬೇಡಿ. ಪೊಲೀಸರಿಗೆ ಬಿಡಿ. ಕಲ್ಲು ಹೊಡೆದವರನ್ನು ಹಿಡಿದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಮುಸಲ್ಮಾನ ಆಗಿರಲಿ,
ಹಿಂದೂ ಆಗಿರಲಿ, ಮತ್ತೊಬ್ಬ ಆಗಿರಲಿ, ಯಾರೇ ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಈ ವಿಚಾರವನ್ನು ಪೊಲೀಸರಿಗೆ ಬಿಟ್ಟುಬಿಡಬೇಕು. ಅದೆಲ್ಲ ಬಿಟ್ಟು, ಇವರು ಹೋಗಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ, ಮತ್ತೆ ಜನರನ್ನೆಲ್ಲ ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿಯವ್ರು ವೀರಾವೇಷದಲ್ಲಿ ಮಾತಾಡಿ, ಬಳಸಬಾರದ ಪದಗಳನ್ನು ಬಳಸುವುದರಿಂದ ಏನು ಸಾಧನೆ ಮಾಡುತ್ತಾರೆ? ಅವರು ರಾಜಕೀಯ ಕಾರಣಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ಯಾರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೋ, ಅಂಥವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.