ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಫೋನ್ ಮೂಲಕ ಅಶ್ಲೀಲ ನಿಂದನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.
ಪೌರಾಯುಕ್ತೆ ಅಮೃತಾ ಗೌಡ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿ, BNS 79, 132, 352, 199, 54 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರಿನಲ್ಲಿ, ತಮಗೆ ಮಾನಸಿಕವಾಗಿ ಭಾರೀ ಆಘಾತ ಉಂಟಾಗಿದ್ದು, ತಾವು ಕೇಂದ್ರ ಸ್ಥಾನದಲ್ಲಿ ಒಬ್ಬರೇ ವಾಸಿಸುತ್ತಿರುವುದರಿಂದ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಯ ಅಮೃತಾ ಗೌಡ, “ಬ್ಯಾನರ್ ತೆರವುಗೊಳಿಸುವ ಪ್ರಕ್ರಿಯೆ ಸಂಪೂರ್ಣವಾಗಿ ನಿಯಮಾನುಸಾರವಾಗಿತ್ತು. ಕೌನ್ಸಿಲರ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಸಾರ್ವಜನಿಕ ತೊಂದರೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನೋವು ತಂದಿದೆ” ಎಂದಿದ್ದಾರೆ.
ಆರೋಪಕ್ಕೆ ರಾಜೀವ್ ಗೌಡ ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಡಿಯೋ ಕುರಿತು ಪ್ರತಿಕ್ರಿಯಿಸಿದ ರಾಜೀವ್ ಗೌಡ,
“ನಾನು ಅಧಿಕಾರಿಗೆ ಬೆದರಿಕೆ ಹಾಕಿಲ್ಲ. ಫ್ಲೆಕ್ಸ್ಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದೇನೆ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ಯಾವುದೇ ಕಾನೂನು ಕ್ರಮಕ್ಕೂ ಸಿದ್ಧ” ಎಂದು ಹೇಳಿದ್ದಾರೆ.
ಈ ಘಟನೆಯ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜೀವ್ ಗೌಡನ ಬಂಧನಕ್ಕೆ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಮಹಿಳಾ ಅಧಿಕಾರಿಗಳ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ
‘ಕಲ್ಟ್’ ಸಿನಿಮಾ ಪ್ರಚಾರದ ವೇಳೆ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾನರ್ ಹಾಕಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದ್ದರು. ಇದಕ್ಕೆ ಸಂಬಂಧಿಸಿ ರಾಜೀವ್ ಗೌಡ ಪೌರಾಯುಕ್ತೆಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



