ಬೆಂಗಳೂರು: ಹೆತ್ತ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಭಾವಚಿತ್ರಗಳನ್ನು ರಹಸ್ಯವಾಗಿ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿದ್ದ ಆರೋಪದಡಿ ಮಗಳ ವಿರುದ್ಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ನಿವಾಸಿಯಾದ 49 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ, ಮಗಳು ಹಾಗೂ ಆಕೆಯ ಪ್ರಿಯಕರ ವರುಣ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರ ಮಹಿಳೆಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಖಾಸಗಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಕಳೆದ ವರ್ಷ ಮಗಳಿಗೆ ಮೊಬೈಲ್ ನೀಡಲಾಗಿತ್ತು.
ಸುಮಾರು ಒಂದು ತಿಂಗಳ ಹಿಂದೆ ಮಗಳು ಅಪರಿಚಿತ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿ ರುವುದನ್ನು ಗಮನಿಸಿದ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗಳಿಗೆ ತಿಳುವಳಿಕೆ ಹೇಳಿ ಮೊಬೈಲ್ ಪರಿಶೀಲಿಸಿದಾಗ, ತನ್ನ ಖಾಸಗಿ ಭಾವಚಿತ್ರಗಳು ಫೋನ್‌ನಲ್ಲಿ ಇರುವುದನ್ನು ಕಂಡು ತಾಯಿ ಆಘಾತಗೊಂಡಿದ್ದಾರೆ.
ಅಲ್ಲದೆ, ತನ್ನ ಸಹೋದರಿಯ ಬೆತ್ತಲೆ ಚಿತ್ರಗಳನ್ನೂ ಮಗಳು ಯುವಕನಿಗೆ ಕಳುಹಿಸಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಗಳ ಮೊಬೈಲ್‌ನಲ್ಲಿ ಯುವಕ ತಾಯಿಯ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಸಂದೇಶ ರವಾನಿಸಿದ್ದೂ ಪತ್ತೆಯಾಗಿದೆ. ಬಳಿಕ ಮಗಳಿಗೆ ಬುದ್ಧಿ ಹೇಳಿ ಮೊಬೈಲ್‌ನಲ್ಲಿದ್ದ ಚಿತ್ರಗಳನ್ನು ಡಿಲೀಟ್ ಮಾಡಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಕೆಲ ದಿನಗಳ ಬಳಿಕ ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಜಗಳ ಮಾಡಿಕೊಂಡು ಮಗಳು ಮನೆ ಬಿಟ್ಟು ಹೋಗಿದ್ದಾಳೆ. ತನ್ನ ಖಾಸಗಿ ಫೋಟೋಗಳನ್ನು ಯುವಕ ಬೇರೆಯವರಿಗೆ ಕಳುಹಿಸಿರುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ತಾಯಿ, ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



