ಬೆಂಗಳೂರು: ಮಹಿಳೆಯೋರ್ವಳು ತಮ್ಮ ಮೇಲೆ ಶಾಸಕ ಕುಲಕರ್ಣಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು , ಇದರ ಸಂಬಂಧ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಆರೋಪಿ 1 (A1) ಮತ್ತು ಅವರ ಆಪ್ತ ಸಹಾಯಕ ಅರ್ಜುನ್ ಅನ್ನು ಆರೋಪಿ 2 (A2) ಎಂದು ಹೆಸರಿಸಿ FIR ದಾಖಲಿಸಿದ್ದಾರೆ.
ದೂರು ನೀಡಿದ ಮಹಿಳೆ
ಶಾಸಕ ವಿನಯ್ ಕುಲಕರ್ಣಿ ಅವರು 2022 ರಿಂದ ನನಗೆ ಪರಿಚಯ. ಆಗಾಗ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಲು ಹೇಳುತ್ತಿದ್ದರು. ಅದೇ ರೀತಿ ಅವರು ಮನೆಗೆ ಕರೆಸಿಕೊಂಡಿದ್ದರು. 2022ರ ಆಗಸ್ಟ್ 24 ರಂದು ಸಂಜೆ 4 ಗಂಟೆಗೆ ಆಟೋದಲ್ಲಿ ಅವರ ಮನೆಗೆ ಹೋಗಿದ್ದೆ. ಈ ವೇಳೆ ಅತ್ಯಾಚಾರ ನಡೆದಿದೆ ಎಂದು ದೂರಿದ್ದಾರೆ.
ತಮ್ಮ ಮನೆಯಿಂದ ಕಾರಿನಲ್ಲಿ ಹೊರಗೆ ಬಂದ ವಿನಯ್ ಕುಲಕರ್ಣಿ ಒಳಗೆ ಕುಳಿತುಕೊಳ್ಳುವಂತೆ ಹೇಳಿದ್ದರು. ಬಳಿಕ ದೇವನಹಳ್ಳಿ ಸಮೀಪದ ಐವಿಸಿ ರೋಡ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆಯಾದ ಬಳಿಕ ಹಿಂದಿನ ಸೀಟ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದೂ ತಮ್ಮ ಮೇಲೆ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ದೂರು ಬೆನ್ನಲ್ಲೇ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, 504, 201, 366, 376, 323, 354 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದು, ಆರೋಪದ ಮಾಡಿದ ಮಹಿಳೆ ರೈತ ಸಂಘದ ಮುಖಂಡೆ. ರೈತರನ್ನು ಕರೆದುಕೊಂಡು ಸಮಸ್ಯೆ ಹೇಳಿಕೊಂಡು ಬರುತ್ತಿದ್ದರು.
ರೈತರಿಗೆ ನಾನು ಸಹಾಯ ಮಾಡಿದ್ದೆ. ಇದು ಮುಂದುವರಿದು ನನಗೆ ವಿಡಿಯೋ ಕಾಲ್ ಮಾಡುತ್ತಿದ್ರು. ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ರೀಲ್ಸ್ ಕಳಿಸುತ್ತಿದ್ದರು. ನಮ್ಮ ಮಧ್ಯೆ 3.5 ವರ್ಷದಿಂದ ಯಾವುದೇ ಕಾಲ್, ಮೆಸೇಜ್ ನಡೆದಿಲ್ಲ.
3.5 ವರ್ಷದ ಹಿಂದಿನ ವಿಡಿಯೋ ಕಾಲ್ ಇಟ್ಟುಕೊಂಡು ಈಗ ಆರೋಪ ಮಾಡುತ್ತಿರುವುದು ಅಚ್ಚರಿಯಾಗುತ್ತಿದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಹಿಂದೆಯಿಂದ ಆರೋಪ ಮಾಡಿಸಿದ್ದಾರೆ. ನಾನೂ ಕೂಡ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ. ಸತ್ಯಾಸತ್ಯತೆ ಹೊರಬರಲಿ” ಎಂದು ವಿನಯ ಕುಲಕರ್ಣಿ ಹೇಳಿದ್ದಾರೆ.