ಕೊಪ್ಪಳ:- ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿಂದೂ- ಮುಸ್ಲಿಮರ ನಡುವೆ ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಯತ್ನಾಳ್ ಹೇಳಿದ್ದೇನು?
ಆ.10ರಂದು ಕೊಪ್ಪಳಕ್ಕೆ ಬಂದಿದ್ದ ಯತ್ನಾಳ್ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನ ಮದುವೆಯಾದರೆ 5 ಲಕ್ಷ ರೂ. ಕೊಡುವ ಕಾರ್ಯಕ್ರಮ ತರೋದಾಗಿ ಹೇಳಿದ್ದರು. ಈ ಮೂಲಕ ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾರವಿದೆ ಎಂದು ಹೇಳಿಕೆ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಹಿನ್ನೆಲೆ ಕೊಪ್ಪಳದ ಕುವೆಂಪು ನಗರದ ನಿವಾಸಿ ಅಬ್ದುಲ್ ಕಲಾಂ ದೂರು ನೀಡಿದ್ದು ಯತ್ನಾಳ್ ಹೇಳಿಕೆಯಿಂದ ಎರಡು ಧರ್ಮಗಳ ನಡುವೆ ದ್ವೇಷ ಬೆಳೆಯುವಂತಾಗಿದೆ. ಮುಸ್ಲಿಂ ಮಹಿಳೆಯರನ್ನ ಕೀಳಾಗಿ, ಕೆಟ್ಟ ಮನಸ್ಥಿತಿಯಿಂದ ನೋಡುವುದಲ್ಲದೇ ಅವರನ್ನು ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.



