ಬಾಗಲಕೋಟೆ: ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮನೆಯ ಮುಂದೆ ಹಚ್ಚಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಮೇಶ್ ಮೇಟಿ ಅವರ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ. ಇದೇ ಕಟ್ಟಡದಲ್ಲಿ ರಾಜೇಂದ್ರ ತಪಶೆಟ್ಟಿ ಕುಟುಂಬ ಹಾಗೂ ಮತ್ತೊಂದು ಕುಟುಂಬ ಬಾಡಿಗೆಗೆ ವಾಸವಿದ್ದರು. ರಾಜೇಂದ್ರ ತಪಶೆಟ್ಟಿ ಕುಟುಂಬದವರು ಮನೆ ಎದುರು ದೀಪ ಹಚ್ಚಿದ್ದು, ಆ ದೀಪದ ಬೆಂಕಿ ಮನೆ ಎದುರಿಗೆ ಬಿದ್ದಿದ್ದ ಆಯಿಲ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ.ಮನೆ ಮುಂದಿನ ಎರಡು ಬೈಕ್ ಸುಟ್ಟು, ಮನೆಗೂ ಬೆಂಕಿ ಪ್ರವೇಶಿಸಿದೆ. ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿ ಮತ್ತಷ್ಟು ಬೆಂಕಿಯ ತೀವ್ರತೆ ಹೆಚ್ಚಾದೆ. ನೋಡನೋಡುತ್ತಿದ್ದಂತೆ ಮನೆ ಸುಟ್ಟು ಕರಕಲಾಗಿದೆ.
ತಪಶೆಟ್ಟಿ ಅವರು ಬೋರ್‌ವೆಲ್ ಕೆಲಸ ಮಾಡುತ್ತಿದ್ದು, ಮನೆ ಎದುರು ಬಿದ್ದಿದ್ದ ಆಯಿಲ್ ಮತ್ತು ಗ್ರೀಸ್ ಬೆಂಕಿ ಹೊತ್ತಿಕೊಂಡ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವೇಳೆ ತಪಶೆಟ್ಟಿ ಕುಟುಂಬದವರು ಸಮಯಕ್ಕೆ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಕಟ್ಟಡದ ಮೇಲ್ಮಹಡಿಯಲ್ಲಿ ವಾಸವಿದ್ದ ಮತ್ತೊಂದು ಕುಟುಂಬದ ಸದಸ್ಯರಿಗೆ ಬೆಂಕಿಯ ಜಳ ತಗುಲಿ ಗಾಯಗಳಾಗಿವೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದ್ದು, ಕಲಾದಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.