ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ಕುರಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 30 ಕುರಿಗಳು ಸಜೀವ ದಹನವಾದ ದುರ್ಘಟನೆ ನಡೆದಿದೆ.
ಸಾವಿಗೀಡಾದ ಕುರಿಗಳು ಹುಚ್ಚಪ್ಪ ಮುದ್ದಿ ಅವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ. ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಶೆಡ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿ ಹಾನಿ ಉಂಟುಮಾಡಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಘಟನಾ ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರ್ಘಟನೆಯಲ್ಲಿ ಭಾರೀ ನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.



