ರಾಯಚೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು ಏಳು ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಸಿಂಧನೂರು ಪಟ್ಟಣದ ಕನಕದಾಸ ವೃತ್ತದ ಬಳಿ, ಆರನೇ ವಾರ್ಡ್ ವ್ಯಾಪ್ತಿಯಲ್ಲಿ ಇರುವ ದೆಹಲಿ ಬಜಾರ್,
ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ, ಚಿಕ್ಕನ್ ಶಾಪ್, ಜನರಲ್ ಸ್ಟೋರ್, ಹಗ್ಗ ಮಾರಾಟ ಕೇಂದ್ರ ಸೇರಿದಂತೆ ಒಟ್ಟು ಏಳು ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡು ಅವು ಸಂಪೂರ್ಣವಾಗಿ ಭಸ್ಮವಾಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ನಸುಕಿನ ಜಾವದವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದ ಈ ಅಂಗಡಿಗಳಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ.
ಒಂದರ ಪಕ್ಕ ಒಂದರಂತೆ ನಿರ್ಮಿಸಲಾದ ಅಂಗಡಿಗಳಿದ್ದ ಕಾರಣ, ಒಂದು ಅಂಗಡಿಯಿಂದ ಮತ್ತೊಂದಕ್ಕೆ ಬೆಂಕಿ ವೇಗವಾಗಿ ಹರಡಿದೆ. ಆದರೂ ಹೆಚ್ಚಿನ ಅನಾಹುತ ಸಂಭವಿಸದಂತೆ ಎಚ್ಚರಿಕೆಯಿಂದ ಬೆಂಕಿ ನಂದಿಸಲಾಗಿದ್ದು, ಭಾರೀ ದುರಂತ ತಪ್ಪಿದೆ.
ಸದ್ಯ ಅಗ್ನಿ ಅವಘಡದಿಂದ ಉಂಟಾದ ನಷ್ಟದ ನಿಖರ ಪ್ರಮಾಣ ತಿಳಿದುಬಂದಿಲ್ಲ. ಎಲ್ಲ ಅಂಗಡಿಗಳೂ ಟಿನ್ ಶೆಡ್‌ಗಳಿಂದ ನಿರ್ಮಿಸಲ್ಪಟ್ಟಿದ್ದವು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ನಷ್ಟ ಪರಿಹಾರ ನೀಡುವಂತೆ ಅಂಗಡಿ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.
ಸಿಂಧನೂರು ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



