ಫ್ಲೋರಿಡಾ:- ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ ನಡೆದ ಘಟನೆ ಫ್ಲೋರಿಡಾದ ಗಾಲ್ಫ್ ಕೋರ್ಸ್ ಬಳಿ ಜರುಗಿದೆ.
ಅದೃಷ್ಟವಶಾತ್ ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ. ಆದರೆ ಟ್ರಂಪ್ ಅವರನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆದಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಫ್ಲೋರಿಡಾದ ಗಾಲ್ಫ್ ಕ್ಲಬ್ ನಲ್ಲಿದ್ದ ಟ್ರಂಪ್ ಮೇಲೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ, ಟ್ರಂಪ್ ಅವರಿಗೆ ಯಾವುದೇ ಗುಂಡು ತಾಕಿಲ್ಲ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಇದೇ ವರ್ಷ ಜುಲೈ 13ರಂದು ಅವರ ಮೇಲೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಬಟ್ಲರ್ ಎಂಬಲ್ಲಿ ಅವರ ಮೇಲೆ ಗುಂಡಿನ ದಾಳಿಯಾಗಿತ್ತು. ಅಂದು ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಅವರ ಮೇಲೆ ಸುಮಾರು 442 ಅಡಿಗಷ್ಟು ದೂರದಿಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ.
ಅಂದು ಹಾರಿದ ಗುಂಡು ಅವರ ಬಲಕಿವಿಯ ತುದಿಯನ್ನು ಸವರಿಕೊಂಡು ಹೋಗಿತ್ತು. ಅದರಿಂದಾಗಿ ಟ್ರಂಪ್ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದರು.