ಬೆಂಗಳೂರು:- ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ನಡೆದಿದ್ದು, ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಿಕ್ಕಿ ರೈ ಹತ್ಯೆಗೆ ಯತ್ನ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಯಾವ ಕಾರಣಕ್ಕೆ ಗುಂಡು ಹಾರಿಸಲಾಯ್ತು ಅನ್ನೋದು ಇನ್ನೂ ನಿಗೂಢವಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಿಕ್ಕಿ ರೈ ಅವರು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್ ಐಆರ್ ನಲ್ಲಿ ಉಲ್ಲೇಖಿಸಿರುವ ರಾಕೇಶ್ ಮಲ್ಲಿ, ಅನುರಾಧ ರೈ, ನಿತೀಶ್ ಶೆಟ್ಟಿ, ವೈದ್ಯನಾಥನ್ ಇವರುಗಳೇ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ. ಆಸ್ತಿ ವಿಚಾರವೇ ಗುಂಡಿನ ದಾಳಿಗೆ ಕಾರಣ ಎಂದಿದ್ದಾರೆ.
ನಾನು ರಷ್ಯಾದಲ್ಲಿದ್ದೆ , ಜಮೀನು ವಿವಾದ ಸಂಬಂಧ ಕೋರ್ಟ್ ನಲ್ಲಿ ಕೇಸ್ ಇತ್ತು. ಹೀಗಾಗಿ, ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿಗೆ ಸದಾಶಿವನಗರ, ಬಿಡದಿ ವಾಸವಿರುತ್ತಿದ್ದೆ. ಹನ್ನೆರಡು ಗಂಟೆಗೆ ಎರಡು ಕಾಲ್ ಬಂದಿದ್ದು, ಹಾಗಾಗಿ ಹೊರಟಿದ್ದೆ. ಸದಾಶಿವನಗರ ಮನೆಗೆ ಹೋಗುವಾಗ ಮನೆಯಿಂದ ಹೊರಗಿನ ರಸ್ತೆ ಗೆ ಬಂದಾಗ ಅಟ್ಯಾಕ್ ಮಾಡಲಾಗಿದೆ.
ನನ್ನ ಕೈ ಹಾಗೂ ಮೂಗಿಗೆ ಗುಂಡು ತಗಲಿದೆ. ನನ್ನ ಸ್ನೇಹಿತರು ಹಾಗೂ ಡ್ರೈವರ್ ಆಸ್ಪತ್ರೆಗೆ ಸೇರಿಸಿದ್ರು. ರಾಕೇಶ್ ಮಲ್ಲಿ ಹಾಗೂ ನನ್ನ ಚಿಕ್ಕಮ್ಮ ಅನುರಾಧರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ರಿಕ್ಕಿ ರೈ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.



