ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದ ಅಂಗವಾಗಿ ಗದಗ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಅಂಗವಾಗಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕವಾಯತ್ ಮತ್ತು ವಾದ್ಯ ವೃಂದವು ಪ್ರಥಮ ಸ್ಥಾನ ಗಳಿಸಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕೇಂದ್ರ ಕಚೇರಿ ಮಟ್ಟದಲ್ಲಿ ಭದ್ರತಾ ಮತ್ತು ಜಾಗೃತ ಇಲಾಖೆಯು ಕರಾಸ ಪೇದೆಗಳಿಂದ ಕವಾಯತ ಮತ್ತು ವಾದ್ಯ ವೃಂದ ತಂಡವನ್ನ ರಚಿಸಿ ಆ ಮೂಲಕ ಪ್ರತಿ ವರ್ಷ ಸಾರಿಗೆ ಸಂಸ್ಥೆ ಕೇಂದ್ರ ಕಛೇರಿಯಲ್ಲಿ ಜರುಗುವ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ‍್ಯ ದಿನಾಚರಣೆ ದಿನದಂದು ಪ್ರದರ್ಶನ ನೀಡುತಿದ್ದು, ಇದೇ ಮೊದಲ ಬಾರಿಗೆ ಈ ತಂಡವು ವಾದ್ಯ ವೃಂದೊಂದಿಗೆ ಗದಗ ಜಿಲ್ಲಾಡಳಿತದ ವಿವಿಧ ಇಲಾಖೆಗಳಿಂದ ಪಥಸಂಚಲನಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸಿದೆ.
ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ. ಪಾಟೀಲ ಪ್ರಶಸ್ತಿ ನೀಡಿ ಅಭಿನಂದಿಸಿರುವುದು ಸಾರಿಗೆ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ಎಂ ತಿಳಿಸಿ, ಈ ತಂಡಕ್ಕೆ ಅಭಿನಂದಿಸಿ ಪ್ರತಿದಿನ ಬಸ್ಸುಗಳ ನಡುವೆ ಕಾರ್ಯನಿರ್ವಹಿಸುವ ಸಾರಿಗೆ ಸಿಬ್ಬಂದಿಗಳಿಗೆ ಇದೊಂದು ವಿಶಿಷ್ಟ ಅನುಭವವಾಗಿದ್ದು, ಈ ತಂಡವು ಇನ್ನಷ್ಟು ಉತ್ತಮ ಸಾಧನೆ ಮಾಡಲಿ ಎಂದು ಅಭಿನಂದಿಸಿದ್ದಾರೆ.
ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ. ದೇವರಾಜ, ವಿಭಾಗೀಯ ಸಂಚಾರ ಅಧಿಕಾರಿ ಪಡಿಯಪ್ಪ ಮೇತ್ರಿ, ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಮೇರಿ ಮಿರಜಕರ ಸೇರಿದಂತೆ ಹಲವಾರು ಜಿಲ್ಲಾಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದು, ಈ ಪಥ ಸಂಚಲನವನ್ನು ವೀಕ್ಷಿಸಿ ಆನಂದಿಸಿದರು.