ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ-ಲಕ್ಷ್ಮೇಶ್ವರ-ಮುಂಡರಗಿ ತಾಲೂಕುಗಳನ್ನೊಳಗೊಂಡ ಶಿರಹಟ್ಟಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶುಕ್ರವಾರ ಶಿರಹಟ್ಟಿಯ ಎಸ್.ಎಂ. ಡಬಾಲಿ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತದ ವತಿಯಿಂದ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿರಹಟ್ಟಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ 100ಹಾಸಿಗೆ ಆಸ್ಪತ್ರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಟಗಿ-ಸಾಸಲವಾಡ ಏತ ನೀರಾವರಿ ಪುನರಾರಂಭ, ಶೀಘ್ರದಲ್ಲಿಯೇ ಪೂರ್ಣಗೊಂಡಿರುವ ಅಗ್ನಿಶಾಮಕ ಠಾಣೆಯ ಉದ್ಘಾಟನೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ಶಿರಹಟ್ಟಿ ತಾಲೂಕಿನಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಇಂತಹ ಮಹನೀಯರನ್ನು ಸ್ಮರಿಸುವುದರ ಜೊತೆಗೆ ಸ್ವಾತಂತ್ರ್ಯೋತ್ಸವವನ್ನು ಎಲ್ಲರೂ ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ದೇಶದ ಏಕತೆ ಮತ್ತು ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಹೇಳಿದರು.
ತಹಸೀಲ್ದಾರ ಕೆ.ರಾಘವೇಂದ್ರ ರಾವ್ ಧ್ವಜಾರೋಹಣ ನೆರವೇರಿಸಿದರು. ವಿವಿಧ ಇಲಾಖೆಗಳಲ್ಲಿ ಉತ್ತಮ ಸಾಧನೆಗೈದ ಸಿಬ್ಬಂದಿಗಳಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ನಾಗರಾಜ ಮಾಢಳ್ಳಿ, ತಾ.ಪಂ ಇಓ ಆರ್.ವಿ. ದೊಡ್ಡಮನಿ, ಪಿಎಸ್‌ಐ ಚನ್ನಯ್ಯ ದೇವೂರ, ಬಿಇಓ ನಾಣ್ಕಿನಾಯ್ಕ, ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ನಾಗರಾಜ ಲಕ್ಕುಂಡಿ, ಬಿ.ಡಿ. ಪಲ್ಲೇದ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಜಾನು ಲಮಾಣಿ, ವೀರಯ್ಯ ಮಠಪತಿ, ಸಿ.ಸಿ. ನೂರಶೆಟ್ಟರ, ಎಚ್.ಎಂ. ದೇವಗಿರಿ, ಪ್ರಭು ಹಲಸೂರ, ಮಂಜು ಹುಬ್ಬಳ್ಳಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



