ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಾವು ಬೆಳೆಗಾರರಿಗೆ ಮಾವು ಮಾರಾಟ ಮತ್ತು ವಿವಿಧ ಮಾವುಗಳ ಪ್ರದರ್ಶನಕ್ಕೆ ಅವಕಾಶವಾಗುವಂತೆ ಐದು ದಿನಗಳವರೆಗೆ ತೋಟಗಾರಿಕೆ ಕಚೇರಿ ಆವರಣದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ನಗರದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಾವು ಬೆಳೆಗಾರರಿಂದ ಮತ್ತು ಸಾರ್ವಜನಿಕರಿಂದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿದೆ. ಧಾರವಾಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಇದೂ ಒಂದಾಗಿದೆ. ಮಾವು ಮಾರಾಟ ಮೇಳದಲ್ಲಿ ಸುಮಾರು 30 ಜನ ಮಾವು ಬೆಳೆಗಾರರು ಮಳಿಗೆಗಳನ್ನು ಹಾಕಿದ್ದು, ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದು ರೈತರಿಗೆ ಮತ್ತು ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಗ್ರಾಹಕರಿಗೆ ಉತ್ತಮ ಬೆಲೆಗೆ, ರುಚಿಕರವಾದ ಮಾವು ಸಿಗುವುದಕ್ಕೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ, ಮಾವು ಒಂದು ಪ್ರಮುಖ ಬೆಳೆಯಾಗಿದ್ದು, ಒಟ್ಟು 29,610 ಎಕರೆ (11844 ಹೆ)ನಲ್ಲಿ, ಅಂದಾಜು 8,881 ರೈತರು ಮಾವು ಬೆಳೆಯುತ್ತಿದ್ದಾರೆ. ಸಾಂಪ್ರದಾಯಕವಾಗಿ 4 ಟನ್/ಎಕರೆ ಇಳುವರಿ ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಇಳುವರಿಯಲ್ಲಿ ಕುಂಠಿತವಾಗಿದ್ದು, ಸುಮಾರು 1 ಟನ್/ಎಕರೆಯಂತೆ ಜಿಲ್ಲೆಯಿಂದ ಒಟ್ಟು 29 ಸಾವಿರ ಟನ್ ಇಳುವರಿಯನ್ನು ಅಂದಾಜಿಸಬಹುದಾಗಿದೆ ಎಂದು ತಿಳಿಸಿದರು.
ರೈತರಿಗೆ ಒಳ್ಳೆಯ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಮೇಳವನ್ನು ಆಯೋಜನೆ ಮಾಡಿದ್ದೇವೆ. ಧಾರವಾಡ ಜಿಲ್ಲೆಗೆ ಸರಕಾರದಿಂದ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಆದೇಶ ನೀಡಿ, ಈಗಾಗಲೇ ಸುಮಾರು 7 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾವು ಅಭಿವೃದ್ಧಿ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಹಣ್ಣು ಮಾಡುವುದು, ರೈತರಿಗೆ ಗ್ರೇಡಿಂಗ್ ವ್ಯವಸ್ಥೆ, ಮಾವು ಬೆಳೆಗಳ ತರಬೇತಿ, ರೈತರಿಗೆ ಬೇಕಾದ ಎಲ್ಲ ಮಾಹಿತಿಯನ್ನು ನೀಡುವ ಸಮಗ್ರ ಮಾಹಿತಿ ಕೇಂದ್ರವಾಗಿ ನಿರ್ವಹಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಹಾಪ್‌ಕಾಮ್ಸ್ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕೃಷಿ ಇಲಾಖೆ ಉಪ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಹಿರಿಯ ತೋಟಗಾರಿಕೆ ನಿರ್ದೇಶಕ ಇಮ್ತಿಯಾಜ್ ಚಂಗಾಪುರಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ತಮ್ಮಣ್ಣ ಗುಂಡಗೋವಿ ಸೇರಿದಂತೆ ಇತರರು ಇದ್ದರು.
ಬಗೆಬಗೆಯ ಮಾವು
ಹಣ್ಣುಗಳ ರಾಜ ಮಾವಿನ ಹಣ್ಣುಗಳ ವಿವಿಧ ಬಗೆಬಗೆಗಳಾದ ಸುಂದರ ಶಾ, ಪೈರಿ, ಜಿರಗಿಮಾವು, ಉಪ್ಪಿನಕಾಯಿ ತಳಿ, ಅರ್ಕಾ ನೀಲಕಿರಣ, ಸುವರ್ಣರೇಖಾ, ಧಾರವಾಡ ರಸಪೂರಿ, ಖಾದರ, ಫರ್ನಾಡಿನ್, ಕಿಶನ ಭಾಗ್, ಫಜಲಿ, ದಿಲಪಸಂದ, ರತ್ನಾ, ಗೂಂಗ, ಹಿಮಸಾಗರ, ಆಮ್ರಪಾಲ, ನಾಜೂಕ ಪಸಂದ, ಚರಕು ರಸಂ ಮುಂತಾದ ಹಲವಾರು ತಳಿಗಳ ಮಾವಿನ ಹಣ್ಣುಗಳು ಮಾವು ಮೇಳದಲ್ಲಿ ಸಾರ್ವಜನಿಕರಿಗೆ ಮಾರಟಕ್ಕಾಗಿ ಲಭ್ಯ ಇವೆ. ಜಿಲ್ಲೆಯ ಕೆಲವು ಮಾವು ಬೆಳೆಗಾರರಾದ ಪ್ರಮೋದ, ಗಾಂವಕರ, ಶಿವನಗೌಡ ಪಾಟೀಲ, ರಾಜೇಂದ್ರ ಪೋದ್ದಾರ, ಗಿರೀಶ ಕೆರೂರ ಹಾಗೂ ದೇಶಪಾಂಡೆ ಅವರು ಸುಮಾರು 4 ಟನ್ ಮಾವಿನ ಹೆಣ್ಣುಗಳನ್ನು ರೂ. 150 ಕೆಜಿಯಂತೆ ಸಿಂಗಾಪುರ, ಅಮೇರಿಕಾ ರಾಷ್ಟ್ರಗಳಿಗೆ ರಫ್ತು ಮಾಡಿದ್ದಾರೆ.


