ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಗ್ರ ರೈತ ಹೋರಾಟ ಸಮಿತಿ ಲಕ್ಷ್ಮೇಶ್ವರ–ಶಿರಹಟ್ಟಿ–ಮುಂಡರಗಿ ವತಿಯಿಂದ ಗುರುವಾರ ಗದಗನಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಗೋವಿನ ಜೋಳ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ರೈತರು ಸುಮಾರು 18 ದಿನಗಳ ಕಾಲ ಗೋವಿನ ಜೋಳ ಖರೀದಿ ಕೇಂದ್ರ ಸ್ಥಾಪನೆಗಾಗಿ ಅಹೋರಾತ್ರಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮಣಿದ ಸರ್ಕಾರವು ಖರೀದಿ ಕೇಂದ್ರವನ್ನು ಪ್ರಾರಂಭಿಸಿರುವುದಕ್ಕೆ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಮುಖಂಡರಾದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಪೂರ್ಣಾಜಿ ಖರಾಟೆ ಹಾಗೂ ನಾಗರಾಜ ಚಿಂಚಲಿ, ಇದೇ ತಿಂಗಳು 1ನೇ ತಾರೀಕಿನಿಂದ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಖರೀದಿ ಕೇಂದ್ರ ಆರಂಭವಾದ ದಿನದಿಂದಲೇ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆ ಉಂಟಾಗಿದೆ. ನೋಡಲ್ ಸೆಂಟರ್ನಲ್ಲಿ ಕೆಲವೊಂದು ನ್ಯೂನತೆಗಳಿದ್ದು, ಅವುಗಳನ್ನು ಶೀಘ್ರವೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ದಿನಕ್ಕೆ ಕೇವಲ 10 ರೈತರಿಂದ ಮಾತ್ರ ಗೋವಿನ ಜೋಳ ಖರೀದಿ ನಡೆಯುತ್ತಿದ್ದು, ಇದರಿಂದ ಗೋವಿನ ಜೋಳ ಬೆಳೆದ ಸಾವಿರಾರು ರೈತರ ಗತಿ ಏನಾಗಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರ ಬದುಕು ಇನ್ನಷ್ಟು ದುಸ್ತರವಾಗುತ್ತಿದೆ. ಲಕ್ಷ್ಮೇಶ್ವರದಲ್ಲಿ ಗೋವಿನ ಜೋಳ ಖರೀದಿ ಕೇಂದ್ರ ಪ್ರಾರಂಭಕ್ಕಾಗಿ ಹಗಲಿರುಳು ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಜಿಲ್ಲಾಡಳಿತದ ಪ್ರಯತ್ನಗಳು ವ್ಯರ್ಥವಾಗದೆ, ರೈತರಿಗೆ ಆಶಾಕಿರಣವಾಗಬೇಕು ಎಂದು ಅವರು ಮನವಿ ಮಾಡಿದರು.
ಕೇವಲ ನೆಪಕ್ಕೆ ಮಾತ್ರ ಖರೀದಿ ಕೇಂದ್ರವಾಗದೆ, ನಿಜವಾಗಿ ರೈತರ ಬಾಳು ಬೆಳಗುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಕೆಎಂಎಫ್ನವರು ಖರೀದಿಸುವ ಗೋವಿನ ಜೋಳವನ್ನು ಇಲ್ಲಿಯೇ ಖರೀದಿಸಿ ತೆಗೆದುಕೊಂಡು ಹೋಗುವಂತೆ ಆದೇಶ ಮಾಡಬೇಕು. ಇಲ್ಲದಿದ್ದಲ್ಲಿ ರೈತರಿಗೆ ಇದು ಹೆಚ್ಚಿನ ಹೊರೆಯಾಗುತ್ತದೆ. ಖರೀದಿ ಕೇಂದ್ರದಲ್ಲಿ ಇರುವ ನ್ಯೂನತೆಗಳನ್ನು ಆದಷ್ಟು ಶೀಘ್ರ ಸರಿಪಡಿಸಬೇಕು, ಇಲ್ಲದೆ ಇದ್ದಲ್ಲಿ ಮತ್ತೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುತ್ತಣ್ಣ ನೀರಲಗಿ, ಸುರೇಶ್, ಬಸಯ್ಯ ಪೂಜಾರ ಸೇರಿದಂತೆ ಹಲವು ರೈತರು ಹಾಜರಿದ್ದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಖರೀದಿ ಕೇಂದ್ರದಲ್ಲಿ ವಿಳಂಬವಾಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು. ಆದಷ್ಟು ಶೀಘ್ರ ಖರೀದಿ ಪ್ರಕ್ರಿಯೆ ತೀವ್ರಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.



