ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಷಟಸ್ಥಲ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಅದರಿಂದ ಮಾತ್ರ ಭವ ಬಂಧನದಲ್ಲಿ ಮುಕ್ತಿಹೊಂದಲು ಸಾಧ್ಯ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ ಹೇಳಿದರು.
ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ 175ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಮಾನವ ಜನ್ಮವೇ ದೊಡ್ಡ ಸಂಪತ್ತು. ಷಟಸ್ಥಲದ 6 ನಿಯಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಪಾವನವಾಗುತ್ತದೆ. ಶಿವನ ಆರು ಸ್ಥಲಗಳನ್ನು ಪ್ರತಿನಿಧಿಸುವ ಧ್ವಜವನ್ನು ಎತ್ತರಕ್ಕೆ ಹಾರಿಸುವ ಕಾರ್ಯಕ್ರಮವೇ ಷಟಸ್ಥಲ ಧ್ವಜಾರೋಹಣವಾಗಿದೆ. ಇದು ಧಾರ್ಮಿಕ ಉತ್ಸವಗಳಲ್ಲಿ, ಪೀಠಗಳ ಮಹೋತ್ಸವಗಳಲ್ಲಿ, ಅಥವಾ ವೀರಶೈವ ಸಮಾಜದ ಕಾರ್ಯಕ್ರಮಗಳಲ್ಲಿ ನಡೆಯುತ್ತದೆ. ಇದು ಭಕ್ತಿ, ಶರಣ ಸಂಸ್ಕೃತಿ ಮತ್ತು ಶಿವನ ತತ್ವಗಳ ಪಾವಿತ್ರತೆಯನ್ನು ಸಾರುತ್ತದೆ. ಹಾಲಕೆರೆಯ ಶ್ರೀಪೀಠದ ಎಲ್ಲ ಗುರುಗಳು ಷಟಸ್ಥಲ ಮಾರ್ಗವನ್ನು ಅನುಸರಿಸಿ ಎಲ್ಲ ಭಕ್ತರನ್ನು ಸಮಾನವಾಗಿ ಕಂಡು ಅವರ ಉದ್ಧಾರಕ್ಕೆ ಕಾರಣವಾದರು, ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದರು. ಅದೇ ಮಾರ್ಗದಲ್ಲಿ ನಾವು ನಡೆದುಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಇಂದಿನ ಪೀಠಾಧಿಪತಿಗಳಾದ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳು ಶ್ರೀಮಠದಲ್ಲಿ ಆಧ್ಯಾತ್ಮದ ಚಿಂತನೆ ಸದಾ ಕಾಲ ಉಳಿಯುವಂತೆ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಮರಿಕೊಟ್ಟೂರ ದೇಶಿಕರು, ಗ್ರಾ.ಪಂ ಅಧ್ಯಕ್ಷ ಗಿರಿಯಪ್ಪಗೌಡ ಮುಲ್ಕಿಪಾಟೀಲ, ಉಪಾಧ್ಯಕ್ಷ ಬಾಳಪ್ಪ ತಲೇಖಾನ, ವೀರಣ್ಣ ಹಳ್ಳಿ, ಬಸವರಾಜ ಮೇಟಿ ಸೇರಿದಂತೆ ಇತರರಿದ್ದರು.



