ಮನುಷ್ಯನಿಗೆ ಆರೋಗ್ಯ ಸಂಪತ್ತು ಮುಖ್ಯ : ಎಸ್.ವಿ. ಸಂಕನೂರು

0
Flag Hoisting of Taluk Level Dussehra Games
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಯುವಕರು ಕ್ರೀಡೆಯಲ್ಲಿ ಪಾಲ್ಗೊಂಡು ದೈಹಿಕ ಮತ್ತು ಮಾನಸಿಕ ಸಂಪತ್ತನ್ನು ಗಳಿಸಿದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅಭಿಪ್ರಾಯಪಟ್ಟರು.

Advertisement

ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ತಾಲೂಕು ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಯುವ ಸಂಘಗಳ ಒಕ್ಕೂಟ ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ ಗದಗ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಹೊಂದುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ. ಮನುಷ್ಯನಿಗೆ ಆರೋಗ್ಯ ಸಂಪತ್ತು ಬಹಳ ಮುಖ್ಯ. ಪ್ರತಿಯೊಬ್ಬರೂ ಪ್ರತಿ ದಿನ ಯಾವುದಾದರೂ ಒಂದು ದೈಹಿಕ ವ್ಯಾಯಮದಲ್ಲಿ ಪಾಲ್ಗೊಳಬೇಕು. ನಮ್ಮ ದೇಶದ ಹೆಮ್ಮೆಯಾದ ಯೋಗವು ಇಂದು ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಆಚರಿಸಿ ಯೋಗದ ಮಹತ್ವವನ್ನು ಪ್ರಚುರಪಡಿಸಲಾಗುತ್ತಿದೆ ಎಂದರು.

Flag Hoisting of Taluk Level Dussehra Games

ಸರ್ಕಾರ ಕ್ರೀಡೆಗೆ ಮಹತ್ವ ನೀಡಿ ದಸರಾ ಕ್ರೀಡಾಕೂಟವನ್ನು ಆಯೋಜಿಸಿದೆ. ಗೆಲುವು-ಸೋಲಿನ ಬಗ್ಗೆ ಯೋಚನೆ ಮಾಡದೆ ಭಾಗವಹಿಸುವಿಕೆಗೆ ಮಹತ್ವ ನೀಡಿ ಸೋಲು-ಗೆಲವನ್ನು ಕ್ರೀಡಾ ಮನೋಭಾವದಿಂದ ಸಮಾನವಾಗಿ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರೂ ಶಿಸ್ತಿನಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿಯನ್ನು ತರಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೇಮನಿ, ಕೆ.ಎಸ್. ಪಲ್ಲೇದ, ವಾಯ್.ಕೆ. ಚೌಡಾಪುರ, ರಾಜು ಚವ್ಹಾಣ, ದೈಹಿಕ ಶಿಕ್ಷಕರು, ಶಾಲಾ ಮಕ್ಕಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಶೋಭಾ ಮತ್ತು ತಂಡದವರು ಗೀತೆ ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಎಂ.ಎಸ್. ಕುಚಬಾಳ ನಿರ್ವಹಿಸಿದರು. ಎಫ್.ಎಂ. ಮುಶೇಣ್ಣನವರ ವಂದಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೊಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು, ತಾಲೂಕು ಮಟ್ಟದಲ್ಲಿ ವಿಜಯ ಸಾಧಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಮುಕ್ತವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಜಿಲ್ಲೆಗೆ ಕಿರ್ತೀಯನ್ನು ತರಬೇಕು ಎಂದು ನುಡಿದರು.


Spread the love

LEAVE A REPLY

Please enter your comment!
Please enter your name here