ವಿಜಯಸಾಕ್ಷಿ ಸುದ್ದಿ, ಗದಗ: ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿ, ತನ್ನ ಇಡೀ ಜೀವನವನ್ನು ಸ್ವಾತಂತ್ರ‍್ಯ ಹೋರಾಟಕ್ಕೆ ಮೀಸಲಿಟ್ಟು ಕೊನೆಗೆ ದೇಶಕ್ಕಾಗಿ ವೀರಮರಣ ಹೊಂದಿದ ಕ್ರಾಂತಿಕಾರಿ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ ಅಂಗವಾಗಿ ಜನವರಿ 26ರಂದು ಸಾಯಂಕಾಲ 6.30ಕ್ಕೆ ಪಂಜಿನ ಮೇರವಣಿಗೆ ನಡೆಯಲಿದೆ ಎಂದು ಕ್ರಾಂತಿಸೇನಾ ಸಂಘಟನೆಯ ಗೌರವಾಧ್ಯಕ್ಷ ಪ್ರವೀಣ ಹಬೀಬ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಕ್ರಾಂತಿಸೇನಾ ಸಂಘಟನೆ ಹಾಗೂ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಮೇರವಣಿಗೆಯು ಕಿತ್ತೂರ ಚೆನ್ನಮ್ಮ ಸರ್ಕಲ್‌ನಿಂದ ಅರಂಭವಾಗಿ, ಪೋಸ್ಟ್ ಆಫೀಸ್ ಮುಂಭಾಗ, ಪಂಚರೌಂಡ್ ಮೂಲಕ ಸಾಗಿ ಬಸವೇಶ್ವರ ಸರ್ಕಲ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ನಡೆಯಲಿದೆ.
ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮಹೇಂದ್ರಕರ್ ಸರ್ಕಲ್, ಶ್ರೀ ತೋಂಟದಾರ್ಯ ಆಟೋ ನಿಲ್ದಾಣ, ಗಾಂಧಿ ಸರ್ಕಲ್ ಮಾರ್ಗವಾಗಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಸಂಪನ್ನವಾಗಲಿದ್ದು, ಎಲ್ಲ ದೇಶಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಶ್ರೀ ಮಹರ್ಷಿ ವಾಲ್ಮೀಕಿ ಮದಕರಿ ನಾಯಕರ ಗಜಪಡೆ ಟ್ರಸ್ಟ್ ಅಧ್ಯಕ್ಷ ಕಿರಣ್ ಯಲ್ಲಪ್ಪ ನಾಯ್ಕರ್, ಪ್ರದೀಪ್ ಸರ್ವದೆ, ರಾಮು ಗಡಾದ, ಕುಮಾರ ಮಾರನಬಸರಿ, ಶ್ರೀಕಾಂತ ಹೊಸಮನಿ ಉಪಸ್ಥಿತರಿದ್ದರು.