ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಹ್ಯಾಂಡ್‌ಕಾಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಉದ್ಯಾನವನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಧಾರವಾಡ ಜಿಲ್ಲೆಯಲ್ಲಿ 2025-26ನೇ ಸಾಲಿನ ಫಲಪುಷ್ಪ ಪ್ರದರ್ಶನ ಮತ್ತು ಸರಸ ಮೇಳವನ್ನು ಡಿಸೆಂಬರ್ 13ರಿಂದ 15ರವರೆಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.
ಅವರು ಬುಧವಾರ ಪ್ರಸಕ್ತ ವರ್ಷದ ಫಲಪುಷ್ಪ ಪ್ರದರ್ಶನ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮತ್ತು ಉದ್ಯಮ ಇಲಾಖೆಯ ಸರಸ ಮೇಳ ಆಯೋಜನೆ ಕುರಿತು ಜಿ.ಪಂ ಕಾನ್ಫರೆನ್ಸ್ ಹಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಜರುಗಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ವತಿಯಿಂದ 50-60 ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಸ್ವ-ಸಹಾಯ ಸಂಘದ ಮಹಿಳೆಯರು ವಿವಿಧ ವಸ್ತುಗಳು, ಖಾದ್ಯಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವರು. ಇದರಿಂದ ಸ್ವ-ಸಹಾಯ ಸಂಘದ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ರೈತರಿಗೆ ಹಾಗೂ ಸಾರ್ವಜನಿಕರಿಗೆ, ತೋಟಗಾರಿಕೆ ಹಾಗೂ ಕೃಷಿಯಲ್ಲಿನ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ಮಳಿಗೆಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸುವುದು ಮತ್ತು ವಿವಿಧ ತೋಟಗಾರಿಕೆ ಬೆಳೆಗಳ ಹೊಸ ತಳಿಗಳ ಪರಿಚಯ ಹಾಗೂ ಉದ್ಯಾನವನ ಪ್ರಿಯರಿಗೆ ವಿವಿಧ ಜಾತಿಯ ಹೂವಿನ ಹಾಗೂ ಅಲಂಕಾರಿಕ ಗಿಡಗಳ ಪರಿಚಯ, ಕೈತೋಟ ಹಾಗೂ ತಾರಸಿ ತೋಟ ಮಾಡುವುದರ ಕುರಿತು ಮಾಹಿತಿಯನ್ನು ಸಹ ಈ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ ಮಾತನಾಡಿ, ಫಲಪುಷ್ಪ ಪ್ರದರ್ಶನದಲ್ಲಿ ಕೇಂದ್ರ ಬಿಂದುವಾಗಿ ಹೂವಿನಿಂದ ಅಲಂಕೃತವಾದ ಶ್ರೀ ಸಿದ್ಧಾರೂಡರ ಕೈಲಾಸ ಮಂಟಪ, ಸಾಲುಮರದ ತಿಮ್ಮಕ್ಕನ ಕಲಾಕೃತಿ, ಸೆಲ್ಪಿ ಪಾಯಿಂಟ್ ಹಾಗೂ ವಿವಿಧ 15-20 ಜಾತಿಯ ವಾರ್ಷಿಕ ಹೂವಿನ ತಳಿಗಳನ್ನು ಗುಚ್ಛಗಳ ಮಾದರಿಯಲ್ಲಿ ಮಾಡಲಾಗುತ್ತದೆ. ಲ್ಯಾಂಡ್‌ಸ್ಕೇಪ್ ಡಿಸೈನ್ ನಿರ್ಮಾಣ, ತರಕಾರಿ ಮತ್ತು ಹಣ್ಣುಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ, ತರಕಾರಿಗಳ ಜೋಡಣೆ ಹಾಗೂ ವಿವಿಧ ಕಲಾಕೃತಿಗಳು ವಸ್ತುಗಳ ಪ್ರದರ್ಶನವನ್ನು ಮಾಡಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಜಿಲ್ಲಾ ಮಟ್ಟದ ಮೇಳದಲ್ಲಿ ಕೃಷಿ ಇಲಾಖೆಯ ಮಳಿಗೆಯಲ್ಲಿ ನೂತನ ತಂತ್ರಜ್ಞಾನಗಳು, ಇಲಾಖಾ ಯೋಜನೆಗಳು, ಕಾರ್ಯಕ್ರಮಗಳ ಕುರಿತಾದ ಪ್ರದರ್ಶನ ಮಾದರಿಗಳು, ಮಾಹಿತಿ ಫಲಕಗಳು, ಕರಪತ್ರಗಳು ಮುಂತಾದ ವಸ್ತುಗಳನ್ನು ಇಡಲಾಗುವುದು ಎಂದು ತಿಳಿಸಿದರು.



