ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ ವರ್ಷ 518 ಗರ್ಭಿಣಿಯರು ಅಮೆನಿಯಾ ಕೊರತೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಜಾಗೃತಿ ಮೂಡಿಸದಿರುವುದೇ ಇದಕ್ಕೆ ಕಾರಣ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜರುಗಿದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ಹಾಗೂ ಪರಿಸರ ಈ ದೇಶದ ಸಂಪತ್ತು. ಇವುಗಳ ಆರೋಗ್ಯದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸೋಣ. ಎಲ್ಲ ಸರ್ಕಾರಿ ಕಟ್ಟಡ ಮೇಲೆ ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆ-1098 ಬರೆಸಲೇಬೇಕು. ಹೊರ ರೋಗಿಗಳ ಚೀಟಿ, ಸರ್ಕಾರಿ ಎಲ್ಲ ದಾಖಲೆಗಳ ಕೆಳಗೆ ಬಾಲ್ಯ ವಿವಾಹ ಅಪರಾಧ ಎಂದು ಬರೆಸಲೇಬೇಕು ಎಂದು ಹೇಳಿದರು.
ಕಳೆದ 3 ವರ್ಷದಲ್ಲಿ 110ಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ. 2021 ಮತ್ತು 22ರಲ್ಲಿ 12 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಮಕ್ಕಳ ಕಳ್ಳತನಕ್ಕೆ ಸಂಬಂಧಿಸಿದಂತೆ 2023-24 ಹಾಗೂ 2025ರಲ್ಲಿ 43 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಒಂದು ಮಗು ಪತ್ತೆ ಆಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದಾಗ, ಪತ್ತೆ ಆಗದ ಮಗುವಿನ ಕುರಿತು ಆಯೋಗಕ್ಕೆ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬಿ ಮಾತನಾಡಿ, ಮಕ್ಕಳ ರಕ್ಷಣೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.
ಕಳೆದ 5 ವರ್ಷದಲ್ಲಿ 1176 ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ಕಾನೂನು ಕ್ರಮ ಏಕೆ ಕೈಗೊಂಡಿಲ್ಲ ಎಂದು ಅಧ್ಯಕ್ಷರು ಪ್ರಶ್ನಿಸಿದರಲ್ಲದೆ, ಆರೋಗ್ಯ ಇಲಾಖೆಯ ಆರ್‌ಸಿಎಚ್ ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯ ನಿಭಾಯಿಸಿಲ್ಲ. ಬಾಲ ವಿವಾಹ, ಬಾಲ ಗರ್ಭಿಣಿ, ಟೀನೇಜ್ ಗರ್ಭಿಣಿ ಬಗ್ಗೆ ಸಭೆಗೆ ಸರಿಯಾಗಿ ಮಾಹಿತಿಯೊಂದಿಗೆ ಆಗಮಿಸಬೇಕು ಎಂದು ಸೂಚಿಸಿದರು.
ಗ್ರಾಮಗಳಲ್ಲಿ ವಿಕಲಚೇತನ ಮಕ್ಕಳಿಗೆ ಇಲಾಖೆಯಿಂದ ಕಾರ್ಡ್ ಸಿಕ್ಕಿಲ್ಲ. ಪೋಷಕರಿಗೆ ಮಾಹಿತಿ ಕೊರತೆಯಿಂದ ಇಲಾಖೆ ಸೌಲಭ್ಯ ಪಡೆಯುವ ಕಾರ್ಡ್ ಸಿಗುತ್ತಿಲ್ಲ ಎಂದು ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೆಸ್ವಾಮಿ ಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮರಾ, ಜಿಪಿಎಸ್ ಟ್ರ‍್ಯಾಕರ್ ಹಾಗೂ ಚಾಲಕನ ಮಾಹಿತಿ ಕುರಿತು ಪೊಲೀಸ್ ವೆರಿಫಿಕೇಷನ್ ಮಾಡಿರುವ ದಾಖಲೆಗಳನ್ನು ಹೊಂದಿರಬೇಕು. ಶಾಲೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಯ ಪೊಲೀಸ್ ವೆರಿಫೀಕೇಷನ್ ಆಗಬೇಕು. ಆದರೆ ಇವೆಲ್ಲವೂ ಖಾಸಗಿ ಶಾಲಾ ವಾಹನಗಳಲ್ಲಿ ಕಂಡು ಬಂದಿಲ್ಲ ಎಂದು ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಆರೋಪಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಆಯೋಗವು ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಭೆ ನಡೆಸಿದೆ. ಅಲ್ಲಿನ ಅನುಭವಗಳು, ಸಮಸ್ಯೆಗಳು ಹಾಗೂ ನಿವಾರಣೆ ಹೇಗೆ ಎಂದು ವಿವರವಾಗಿ ತಿಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಆಯೋಗದ ಸೂಚನೆಯಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜಾಗೃತಿ ಕತಪತ್ರ, ನೂತನ ಲೋಗೊ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಆಯೋಗದ ಸದಸ್ಯರಾದ ಶಶಿಧರ ಕೊಸಂಬಿ, ಶೇಖರಗೌಡ ರಾಮತ್ನಾಳ, ಡಾ. ಕೆ.ಟಿ. ತಿಪ್ಪೇಸ್ವಾಮಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್ಪಿ ಮಹಾಂತೇಶ ಸಜ್ಜನರ, ಜಯದೇವಿ ಮುಂತಾದವರು ಇದ್ದರು.
ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ 5 ವರ್ಷದ ಮಗುವಿನೊಂದಿಗೆ ತಾಯಿ ಬಿದ್ದು ಸಾವನ್ನಪ್ಪಿದ ಕುರಿತು ಚರ್ಚಿಸಲಾಯಿತು. ಕೃಷಿಹೊಂಡದ ಸುತ್ತಲೂ ರಕ್ಷಣಾ ಬೇಲಿ ಹಾಕಲು ಸರ್ಕಾರ ಆದೇಶ ನೀಡಿದೆ. ಈ ಆದೇಶವನ್ನು ಇಲಾಖೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಆಯೋಗ ನಿರ್ದೇಶನ ನೀಡಿತು. ಕಳೆದ 5 ವರ್ಷದಿಂದ ಜಿಲ್ಲೆಯಲ್ಲಿ ಮಕ್ಕಳ ಅಸಹಜ ಸಾವು ಸಂಭವಿಸಿರುವ ಮಾಹಿತಿ ನೀಡಬೇಕು ಎಂದು ಆಯೋಗ ಒತ್ತಾಯಿಸಿತು. ಅಂಗನವಾಡಿ, ಶಾಲಾ ಸಮೀಪದಲ್ಲಿ ವಿದ್ಯುತ್ ತಂತಿ, ಹೈಟೆನ್ಷನ್ ಸಂಪರ್ಕ ಇರುವ ಬಗ್ಗೆ ವರದಿ ಸಿದ್ಧಪಡಿಸಿ ಇಲಾಖೆಗೆ ಸಲ್ಲಿಸಬೇಕು ಮತ್ತು ತೆರವುಗೊಳಿಸಬೇಕು ಎಂದು ಅಧ್ಯಕ್ಷ ಕೆ.ನಾಗಣ್ಣಗೌಡ ನಿರ್ದೇಶಿಸಿದರು.