ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬರಗಾಲದ ಹಿನ್ನೆಲೆಯಲ್ಲಿ ಉಂಟಾಗಿರುವ ಮೇವಿನ ಕೊರತೆ ನೀಗಿಸಲು ಸರಕಾರದ ನೆರವಿನಿಂದ ತಾಲೂಕಿನ ಹಲವು ಕಡೆ ಮೇವು ಬ್ಯಾಂಕ್ ಪ್ರಾರಂಭಿಸಿ, ಆ ಮೂಲಕ ರಿಯಾಯಿತಿ ದರದಲ್ಲಿ ಮೇವು ವಿತರಿಸಲಾಗುತ್ತಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಮೇವು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಟ್ಟಣದ ಸೋಮೇಶ್ವರ ದೇವಸ್ಥಾನದ ದಕ್ಷಿಣ ಭಾಗದಲ್ಲಿನ ಸಂಗ್ರಹಣಾ ಕೇಂದ್ರ ಸೇರಿ ಬಟ್ಟೂರ, ಶಿಗ್ಲಿ, ಬಾಲೆಹೊಸೂರ ಮತ್ತು ಅಡರಕಟ್ಟಿ ಪಂಚಾಯತಿ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದೆ. ಕಂದಾಯ ಇಲಾಖೆ, ಪುರಸಭೆ, ಗ್ರಾ.ಪಂ, ತಾ.ಪಂ ಮತ್ತು ಪಶುಸಂಗೋಪನಾ ಇಲಾಖೆಯವರ ಸಹಭಾಗಿತ್ವದಲ್ಲಿ ರೈತರಿಗೆ ಮೇವನ್ನು ವಿತರಿಸುವ ಕೆಲಸ ಆಗಬೇಕು.
ಬೇಡಿಕೆಗನುಗುಣವಾಗಿ ಕ್ಷೇತ್ರದ ವಿವಿಧೆಡೆ ಮೇವು ಬ್ಯಾಂಕ್ ಪ್ರಾರಂಭಿಸಲಾಗುವುದು ಎಂದರು.
ಪಶು ವೈದ್ಯಾಧಿಕಾರಿ ಡಾ. ಎನ್.ಎಂ. ಹವಳದ ಮಾತನಾಡಿ, ರೈತರಿಗೆ ಮೇವು ಬೇಕಾದರೆ ಮೇವು ಪೂರೈಕೆ ಅರ್ಜಿ ಭರ್ತಿ ಮಾಡಿ, ಆಧಾರ ಕಾರ್ಡ್ ಹಾಗೂ ಪಶುಸಂಗೋಪನಾ ಇಲಾಖೆಯ ಪ್ರಮಾಣಪತ್ರದೊಂದಿಗೆ ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮೇವು ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.
ಈ ವೇಳೆ ತಹಸೀಲ್ದಾರ ವಾಸುದೇವ ಸ್ವಾಮಿ, ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ರೈತ ಮುಖಂಡ ಟಾಕಪ್ಪ ಸಾತಪುತೆ, ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ಶಕ್ತಿ ಕತ್ತಿ, ಸಂತೋಷ ಜಾವೂರ, ಆಕಾಶ ಸವದತ್ತಿ, ಕರಿಯಪ್ಪ ಹುರಕನವರ, ಮಹದೇವಪ್ಪ ಸಾತಪುತೆ ಇದ್ದರು.
ಪ್ರತಿ 1 ಕೆಜಿ ಮೇವಿನ ಬೆಲೆ 2 ರೂಪಾಯಿ ಇದ್ದು, 1 ಜಾನುವಾರಿಗೆ ಪ್ರತಿ ವಾರಕ್ಕೆ 42 ಕೆಜಿ ಮೇವು ವಿತರಣೆ ಮಾಡಲಾಗುವುದು. ಸದ್ಯ ತಾಲೂಕಿನಲ್ಲಿ 5 ಮೇವು ಬ್ಯಾಂಕ್ ಪ್ರಾರಂಭಿಸಲಾಗಿದ್ದು, ಪ್ರತಿ ಬ್ಯಾಂಕ್‌ನಲ್ಲಿ 4/5 ಟನ್ ಮೇವು ಸಂಗ್ರಹವಿದೆ. ಅಗತ್ಯ ಇರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಎನ್.ಎಂ. ಹವಳದ ಹೇಳಿದರು.