ಸಂಸ್ಕೃತಿಯ ತಳಹದಿಯೇ ಜಾನಪದ ಕಲೆ: ಡಾ. ಅನ್ನದಾನಿ ಹಿರೇಮಠ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಇವೆಲ್ಲವುಗಳಿಗೆ ಮೂಲ ಮಾತೃಕೆ ಜಾನಪದ ಸಂಸ್ಕೃತಿಯಾಗಿದೆ. ಮಾನವನ ಸಂಸ್ಕೃತಿಗೆ ತಳಹದಿ ಜಾನಪದ ಎಂಬುದಾಗಿ ಹಿರಿಯ ಸಾಹಿತಿ, ಕಲಾ ವಿಮರ್ಶಕ ಡಾ. ಅನ್ನದಾನಿ ಹಿರೇಮಠ ನುಡಿದರು.

Advertisement

ಅವರು ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ `ಮನೆಯಂಗಳದಲ್ಲಿ ಸಾಹಿತ್ಯ ಮಾಲಿಕೆ’ ಕಾರ್ಯಕ್ರಮದಲ್ಲಿ ಅಡವಿಸೋಮಾಪುರ ಗ್ರಾಮದ ಎಸ್.ಎಂ. ಪಾಟೀಲ ಅವರ ಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿ `ಜಾನಪದ ಹಬ್ಬಗಳು’ ಎಂಬ ವಿಷಯದ ಕುರಿತು ಮಾತನಾಡಿದರು.

ಜಾನಪದ ಹಬ್ಬಗಳು, ಆಟಗಳು, ಆಚರಣೆಗಳು ನಮ್ಮ ಪ್ರಾಚೀನ ಜಾನಪದರಿಂದ ಬೆಳೆದು ಬಂದ ಸಂಸ್ಕೃತಿ. ಇವುಗಳು ಜಾನಪದ ಅನುಸರಣೆ, ಅನುಕರಣೆ ಹಾಗೂ ಅನುಸಂಧಾನದಿAದಾಗಿ ಬಂದ ಬಳುವಳಿ. ಈ ಎಲ್ಲಾ ಹಬ್ಬಗಳು ಆರೋಗ್ಯ ಹಾಗೂ ವಿಜ್ಞಾನದ ತಳಹದಿಯಲ್ಲಿಯೇ ಮೂಡಿಬಂದಿವೆ. ಈ ನಂಬಿಕೆಗಳು ಮೂಢನಂಬಿಕೆಗಳಲ್ಲ. ಸಿಹಿಯನ್ನು ಹಬ್ಬ ಹರಿದಿನಗಳಲ್ಲಿ ತಿಂಗಳಿಗೊಮ್ಮೆ ಅಥವಾ ಎರಡು ಸಲ ಮಾತ್ರ ಬೆಲ್ಲ ಉಪಯೋಗಿಸಿ ತಿನ್ನುವುದರ ಹಿಂದೆ ಆರೋಗ್ಯದ ವಿಜ್ಞಾನವಿದೆ. ಅದನ್ನು ತಿಳಿಯದೆ ನಾವಿಂದು ಪ್ರತಿದಿನವೂ ಬೇಕರಿ ಹಾಗೂ ಸಕ್ಕರೆಯ ಉತ್ಪಾದನೆಗಳನ್ನು ತಿನ್ನುತ್ತಾ ಬಂದಿದ್ದೇವೆ. ಆದ್ದರಿಂದಲೇ ನೂರಾರು ರೋಗಗಳು ಮನುಷ್ಯನಲ್ಲಿ ಮನೆ ಮಾಡಿಕೊಂಡವು ಎಂದರು.

ಇನ್ನೋರ್ವ ಅತಿಥಿ, ಹಿರಿಯರಾದ ಶರಣೆ ರತ್ನಕ್ಕ ಪಾಟೀಲ ಮಾತನಾಡಿ, ಎಲ್ಲರಲ್ಲೂ ಹೃದಯ ಶ್ರೀಮಂತಿಕೆ ಇರಬೇಕು. ಎಲ್ಲಿದ್ದರೂ ಸಹಮತ, ಸಹಬಾಳ್ವೆ, ಕೂಡಿ ಉಣ್ಣುವ ಪರಿಪಾಠವನ್ನು ಕಲಿಯಬೇಕು. ಹೀಗಿದ್ದಾಗ ಮನೆ ಮಂದಿಯಲ್ಲಿ, ಸಂಬಂಧಗಳಲ್ಲಿ ಬಾಂಧವ್ಯ ಗಟ್ಟಿಯಾಗಿರುತ್ತದೆ. ಅದರೊಟ್ಟಿಗೆ ಮನೆಯ ಹಿರಿಯರನ್ನು ಗೌರವಿಸುವುದನ್ನು ಮುಂಬರುವ ಪೀಳಿಗೆಗೆ ಕಲಿಸಿಕೊಡಬೇಕು. ಸಿರಿತನ-ಬಡತನ ಎನ್ನುವ ಭಾವವನ್ನ ಬಿಟ್ಟು ಕಾಯಕ, ಸತ್ಯ ಶುದ್ಧರಾಗಿ ಬದುಕಬೇಕು. ಮತ್ತೊಬ್ಬರಿಗೂ ಬದುಕಲು ಅನುವು ಮಾಡಿಕೊಡಬೇಕು ಎಂದರು.

ಶಿವಕುಮಾರ್ ಅಂಗಡಿ ಮಾತನಾಡಿ, ಗ್ರಾಮೀಣ ಬದುಕು ಮಣ್ಣಿನಿಂದ ಆರಂಭವಾಗುತ್ತದೆ. ಮಣ್ಣಿನೊಂದಿಗೆ ಬಾಂಧವ್ಯವನ್ನು ಹೊಂದಿರುವ ನಮ್ಮ ರೈತಾಪಿ ಜನರಲ್ಲಿ ಸಂಬಂಧಗಳು ಗಟ್ಟಿಯಾಗಿ ಉಳಿದುಕೊಂಡು, ಒಗ್ಗಟ್ಟಾಗಿ ಹಬ್ಬದ ಆಚರಣೆಗಳನ್ನು ಹಳ್ಳಿಗಳಲ್ಲಿಯೇ ಆಚರಿಸುವ ಸಂಪ್ರದಾಯ ಇನ್ನೂ ಇದೆ ಎಂದರು.

ಅಡವಿಸೋಮಾಪುರದ ಶರಣವ್ವ ಶೇಖಪ್ಪ ಹುಳ್ಳಿ, ಹನುಮವ್ವ ರಾಮಪ್ಪ ಹೊಂಬಳ, ಈರವ್ವ ಎಲ್ಲಪ್ಪ ಬೆಳ್ಳಿ, ನೀಲಮ್ಮ ಮುದುಕಪ್ಪ ಜಗ್ಗಲ, ಸೀತವ್ವ ವಾಸಪ್ಪ ಹೊಸಳ್ಳಿ, ಅನಸವ್ವ ದ್ಯಾಮಣ್ಣ ಹುಳ್ಳಿ, ಸುಮಂಗಲಾ ಮಲ್ಲನಗೌಡ ಪಾಟೀಲ, ಭರಮವ್ವ ಕಾಶಪ್ಪ ಹಮ್ಮಿಗಿ, ಸುಭದ್ರವ್ವ ಎಲ್ಲಪ್ಪ ಕತ್ತಿ, ಮಾಬೂಬಿ ಕುಮನೂರ ಚರಿತ್ರೆಯ ಸೋಬಾನ ಪದಗಳನ್ನು ಹಾಡಿದರು. ಅಕ್ಕಮಹಾದೇವಿ ಕಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಹೇರಲಗಿ ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು. ವಿಶ್ವನಾಥ ಬೇಂದ್ರೆ ಕಾರ್ಯಕ್ರಮ ನಿರೂಪಿಸಿದರು.ಪಾರ್ವತಿ ಬೇವಿನಮರದ ವಂದಿಸಿದರು.

ಗದಗ ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ಮಾತನಾಡಿ, ಮನೆ ಮನೆಗೆ ಕನ್ನಡ ಸಾಹಿತ್ಯವನ್ನು ತಲುಪಿಸುವುದೇ ನಮ್ಮ ಉದ್ದೇಶ. ಅದರಲ್ಲೂ ಇಂದಿನ ದಿನಮಾನಗಳಲ್ಲಿ ಅಳಿಸಿ ಹೋಗುತ್ತಿರುವ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವ ಅಗತ್ಯತೆ ಇದೆ. ಹಾಗಾಗಿ ಸಕ್ರಮ್ಮ ಪಾಟೀಲ್ ಅಮ್ಮನವರ ಸ್ಮರಣಾರ್ಥ ಹಮ್ಮಿಕೊಂಡ ಈ ಕಾರ್ಯಕ್ರಮ ನಿಜಕ್ಕೂ ಅವರಲ್ಲಿರುವ ಸಾಹಿತ್ಯಾಭಿಮಾನವನ್ನು ಸ್ಮರಿಸುವುದಾಗಿದೆ ಎಂದರು.

 


Spread the love

LEAVE A REPLY

Please enter your comment!
Please enter your name here