ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ಗಿರಿಜನ ಉಪಯೋಜನೆಯಡಿ ಜನಪದ ಸಂಗೀತ ಕಲಾ ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಗದಗ ನಗರದ ಗಂಗಿಮಡಿಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ (ಪ.ಪಂ) ಬಾಲಕರ ವಸತಿ ನಿಲಯದಲ್ಲಿ ಚಾಲನೆ ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನಪದ ಸಂಗೀತ ನಾಡಿನ ಜನರ ಜೀವನ ಶೈಲಿಯನ್ನು ಪರಿಚಯಿಸುವ ಪರಂಪರೆಯಾಗಿದೆ. ಜನಪದ ಸಂಗೀತದ ಮೂಲಕ ನಮ್ಮ ಸಂಪ್ರದಾಯಿಕ ಜೀವನ ಶೈಲಿಯನ್ನು ಕಟ್ಟಿಕೊಡುವ ಮೂಲಕ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಸಂಗೀತವಾಗಿದೆ. ಇದನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಸರ್ಕಾರ ವಸತಿ ಶಾಲೆಯ ಮಕ್ಕಳಿಗೆ ನುರಿತ ತರಬೇತಿದಾರರಿಂದ ಕಲಾ ತರಬೇತಿ ಕಾರ್ಯಕ್ರಮವನ್ನು ಮುಂದಿನ ಆರು ತಿಂಗಳ ಕಾಲ ನಡೆಸಿಕೊಡಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಿಂದ ನುರಿತ ತರಬೇತಿದಾರರನ್ನು ನಿಯೋಜಿಸುವ ಮೂಲಕ ವಾದ್ಯ ಪರಿಕರಗಳ ಜೊತೆಗೆ ವಾರದಲ್ಲಿ ಮೂರು ದಿನದಂತೆ ಮುಂದಿನ ಆರು ತಿಂಗಳವರೆಗೆ ವಸತಿ ನಿಲಯದ ಮಕ್ಕಳಿಗೆ ಜನಪದ ಸಂಗೀತ ತರಬೇತಿ ನೀಡಲಾಗುತ್ತಿದ್ದು, ಇದನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಎನ್, ಗದಗ ಸರಕಾರಿ ಮೆಟ್ರಿಕ್ ನಂತರದ (ಪ.ಪಂ)ಬಾಲಕರ ವಸತಿ ನಿಲಯಪಾಲಕರಾದ ರಿಯಾಜ್ ಅಗರಖೇಡ, ಎಚ್.ಎಸ್. ವೆಂಕಟಾಪೂರದ ಜನಪದ ಕಲಾವಿದರಾದ ಗೌಡಪ್ಪ ಬೊಮ್ಮಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ ಸೋಪಡ್ಲಾ, ನವೀನ ಪತ್ತಾರ ಹಾಜರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಜೊತೆಗೆ ಜನಪದ ಸಂಗೀತ ತರಬೇತಿಯನ್ನು ನೀಡುತ್ತಿರುವುದು ಸಂತಸದ ವಿಷಯ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸಂಗೀತ ಪ್ರತಿಭೆ ಅನಾವರಣಕ್ಕೆ ಈ ತರಬೇತಿ ಸಹಕಾರಿಯಾಗಲಿದೆ ಎಂದರು.