ಜಾನಪದ ಯಾವುದೇ ವರ್ಗಕ್ಕೆ ಸೀಮಿತವಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜನಪದ ಸಾಹಿತ್ಯವು ಎಲ್ಲ ಸಾಹಿತ್ಯದ ಮೂಲವಾಗಿದ್ದು, ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಉಡುಗೆ-ತೊಡುಗೆಗಳ, ಮೌಲ್ಯಗಳ ಸಮ್ಮಿಲನವಾಗಿದೆ. ವಿದ್ಯಾರ್ಥಿಗಳು ಜನಪದ ಸಾಹಿತ್ಯ, ಸಂಸ್ಕೃತಿಯನ್ನು ಕೆದಕಿ ಹೊರತೆಗೆಯುವ, ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕು ಎಂದು ಗುಡಗೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ವಾಯ್.ಎಚ್. ಬೀರಣ್ಣವರ ಹೇಳಿದರು.

Advertisement

ಅವರು ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ವಿಜನ್ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಜಾನಪದ ಎನ್ನುವ ಪದ ಇಂಗ್ಲೀಷಿನಲ್ಲಿ ಎಂಬುದಕ್ಕೆ ಸಮಾನಾರ್ಥಕವಾಗಿ ಬಳಸಿರುವ ಕನ್ನಡ ಪದವಾಗಿದೆ. ಜನಪದ ಜ್ಞಾನವೇ ಜಾನಪದ ಎನ್ನಬಹುದು. ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ-ತಲೆಮಾರುಗಳಿಂದ ಬಂದಿರುವ ಮೌಖಿಕ ಪರಂಪರೆಯಲ್ಲಿ ಸಂಬಂಧ ಜ್ಞಾನವೇ ಜಾನಪದವಾಗಿದೆ. ಇದು ತನ್ನದೇ ಆವರಣದಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿದೆ. ಅದು ಯಾವುದೇ ವರ್ಗಕ್ಕೆ, ಜಾತಿಗೆ, ಸೀಮಿತವಾದುದಲ್ಲ ಎಂದರು.

ಇದು ಎಲ್ಲಿಯೂ ಬರೆದಿಟ್ಟ ಸಾಹಿತ್ಯವಲ್ಲ, ಬಾಯಿಂದ ಬಾಯಿಗೆ ಸಾಗಿಬಂದ ಸಾಹಿತ್ಯವಾಗಿದ್ದು, ಇಂದು ಬಂದಿರುವ ಅನೇಕ ಕ್ಯಾಸೆಟ್ ಜಾನಪದ ಸಂಗೀತ ಮೂಲ ಜಾನಪದವಲ್ಲ. ಅಲ್ಲದೆ ಜಾನಪದ ಹಾಡುಗಳು ಬಹುವರ್ಷದವರೆಗೂ ನೆನಪಿನಲ್ಲುಳಿಯುತ್ತವೆ. ಆದರೆ ಕ್ಯಾಸೆಟ್ ಜಾನಪದ ಸಾಹಿತ್ಯ ಆರಂಭದಲ್ಲಿ ವೇಗವಾಗಿ ಪ್ರಸಿದ್ಧಿ ಪಡೆದ ನಂತರದ ದಿನಗಳಲ್ಲಿ ಜನರ ಮನದಿಂದ ದೂರವಾಗುತ್ತದೆ. ಇದು ಮೂಲ ಜಾನಪದಕ್ಕಿರುವ ಜನಪ್ರಿಯತೆಯಾಗಿದೆ ಎಂದ ಅವರು, ಸರಕಾರ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಜಾನಪದ ಉತ್ಸವ ಮಾಡಲು ಆದೇಶಿಸಿರುವುದು ಸರ್ಕಾರಕ್ಕೆ ಜನಪದ ಮೇಲಿರುವ ಕಾಳಜಿಯಾಗಿದೆ ಎಂದರು.

ಪ್ರಾಚಾರ್ಯ ಮಂಜುನಾಥ ಬಂಡಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ, ಡಿ.ಎಂ. ಪೂಜಾರ, ಉಪನ್ಯಾಸಕರಾದ ಬಸವರಾಜ ಶೆಟ್ಟರ, ಗಿರೀಶ ರಡ್ಡಿ, ಪ್ರಸನ್, ರಮೇಶ ಗಿಣಿ, ರಾಜಶೇಖರಯ್ಯ, ಖುಷಾ ಅರಳಿ, ಮೇಘಾ, ಜಯಲಕ್ಷ್ಮೀ, ವಿಜಯಕುಮಾರ, ಶಂಕರ ಬಡಿಗೇರ, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಭಾರತಿ ಸ್ವಾಗತಿಸಿದರು, ಚೈತ್ರಾ ನಿರೂಪಿಸಿದರು. ಕಾವ್ಯಾ ವಂದಿಸಿದರು.

ವಿದ್ಯಾರ್ಥಿಗಳಿಗೆ ಜಾನಪದ ಮಹತ್ವ ಸಾರುವ ಉದ್ದೇಶದಿಂದ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಲೋಹಿತ್ ನೆಲವಿಗಿ ಮಾತನಾಡಿ, ಜಾಣರ ಸಮೂಹ ಸೃಷ್ಟಿಸಿದ ಅನುಭವಿಕ ಅದ್ಭುತ ಸಾಹಿತ್ಯವೇ ಜಾನಪದವಾಗಿದೆ. ಎಲ್ಲರಿಗೂ ಅರ್ಥವಾಗುವ ಗ್ರಾಮೀಣ ಜನರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಒಗಟು, ಲಾವಣಿ, ಸೋಬಾನೆ ಹಾಡು, ಕುಟ್ಟುವ-ಬೀಸುವ ಪದ, ಹಂತಿ ಹಾಡು, ಡೊಳ್ಳಿನ ಹಾಡು, ಮದುವೆ ಹಾಡು ಹೀಗೆ ಇನ್ನೂ ಹಲವಾರು ಪ್ರಕಾರಗಳಲ್ಲಿ ಜಾನಪದ ಸಾಹಿತ್ಯವೇ ತುಂಬಿಕೊಂಡಿದೆ. ಸಂಸ್ಥೆಯಲ್ಲಿ ಇಲಾಖೆಯ ನಿಯಮಾನುಸಾರ ಜಾನಪದ ಉತ್ಸವ ಸೇರಿದಂತೆ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಅಳವಡಿಸಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here