ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಭಾಗೀರತಿ ಬಣಗಾರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರು–ಹಿರಿಯರ ಮಾತುಗಳನ್ನು ಆಲಿಸಿ ಉತ್ತಮ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ಸೋಲುವ ಮಾತೇ ಇಲ್ಲ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಸ್ವಾತಿ ಪೈ ಮಾತನಾಡಿ, ಮಕ್ಕಳೆಂದರೆ ಮುಗ್ಧ ಮನಸ್ಸಿನ ಮೊಗ್ಗುಗಳು, ಮುಗ್ಧತೆಯ ತೋಟದಲ್ಲಿ ಅರಳುವ ಹೂಗಳು. ಪ್ರೀತಿಯ ಕಂಪು ಸೂಸುತ್ತಾ ನಗುವ ಕಂದಮ್ಮಗಳು ಎಲ್ಲರ ಬಾಳಿನ ಬೆಳಕಾಗಿ, ಹೆತ್ತವರ ಬದುಕಿಗೆ ಊರುಗೋಲಾಗಿ ದೇಶದ ಸತ್ಪ್ರಜೆಯಾಗುವ ಕುಡಿಗಳು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಡಕ್ ವಾಕ್, ಕ್ರಾಬ್ ವಾಕ್, ಹೆನ್ ವಾಕ್, ಫ್ರಾಗ್ ರೇಸ್, ಬುಕ್ ಬ್ಯಾಲೆನ್ಸಿಂಗ್ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸ್ವತಂತ್ರ ಹೋರಾಟಗಾರರು, ಉದ್ಯೋಗಸ್ಥರು, ಹೂಗಳು, ಹಣ್ಣು–ತರಕಾರಿಯಂತಹ ವೇಷ–ಭೂಷಣಗಳ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಂಜುಳಾ ಪಾಟೀಲ, ವಿನಾಯಕ ದೊಡ್ಮನಿ, ಪವಿತ್ರ ಕಾರಬಾರಿ, ವೀಣಾ ಜಾಮನೂರ, ಲೀಲಾವತಿ ಬೆಳಗಟ್ಟಿ, ವಿಜಯಲಕ್ಷ್ಮೀ ಮಹಾರಾಜಪೇಠ, ಸಿಮ್ರನ್ ನಾಡಿಗೆರ, ಆಶಾ ಜಾಧವ್ ಮಕ್ಕಳಿಗೆ ಬಹುಮಾನ ವಿತರಿಸಿದರು.


