ವಿಜಯಸಾಕ್ಷಿ ಸುದ್ದಿ, ಗದಗ: ಡೆಂಗ್ಯೂ, ಚಿಕುಂಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಂಗ್ರಹಿಸಿದ ನೀರನ ತೊಟ್ಟಿಯಲ್ಲಿ, ತ್ಯಾಜ್ಯದಲ್ಲಿ ಲಾರ್ವಾ ಬೆಳೆಯುತ್ತವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಮಾಹಿತಿಗಳನ್ನು ಪಾಲಿಸಿ, ಡೆಂಗೀ ತಡೆಗಟ್ಟಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್.ಲಿಂಗದಾಳ ಹೇಳಿದರು.
ಅವರು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಗದಗ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ, ಆಯುಷ್ಮಾನ್ ಆರೋಗ್ಯ ಮಂದಿರ ಅಡವಿಸೋಮಾಪೂರ ಇವರುಗಳ ಸಂಯುಕ್ತಾಶ್ರಯದಲ್ಲಿ ದೊಡ್ಡತಾಂಡೆ (ಜಲಶಂಕರ ನಗರ-2) ಶ್ರೀಬಾಲಾಜಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಅಡ್ವೋಕೇಸಿ ಸಭೆಯಲ್ಲಿ ಮಾತನಾಡಿದರು.
ಯಾವುದೇ ರೀತಿಯ ಜ್ವರ ಇದ್ದರೆ ರಕ್ತ ಪರೀಕ್ಷೆ ಮಾಡಿಕೊಂಡು ಚಿಕಿತ್ಸೆ ಪಡೆಯಿರಿ. ಮನೆಯಲ್ಲಿ ನೀರು ತುಂಬಿರುವ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ಒಣಗಿಸಿ. ನೀರಿನ ಪರಿಕರಗಳನ್ನು ಮುಚ್ಚಿಡಿ. ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಡೆಂಗ್ಯೂ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆಯಿರಲಿ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಾಯ್.ಎನ್. ಕಡೇಮನಿ ಮಾತನಾಡಿ, ಡೆಂಗ್ಯೂ ರೋಗ ಬರದ ಹಾಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸವಿತಾ ಪವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅನಿಲ ಕಾರಬಾರಿ, ತಾಂಡೆಯ ಹಿರಿಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಲಲಿತಾ ಅಂಗಡಿ ಸ್ವಾಗತಿಸಿದರು. ಲಕ್ಷ್ಮೀ ಪೂಜಾರ ನಿರೂಪಿಸಿದರು, ಮಂಜುಳಾ ಆರಿ ವಂದಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತಪ್ಪ ಹಟ್ಟಿಮನಿ ಮಾತನಾಡಿ, ಡೆಂಗ್ಯೂ ಜ್ವರಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು. ನಿಮ್ಮ ಮನೆ ಬಾಗಿಲಿಗೆ ಬರುವ ಆರೋಗ್ಯ ಸಿಬ್ಬಂದಿಗಳಲ್ಲಿ ಅಥವಾ ಆಶಾ ಕಾರ್ಯಕರ್ತೆಯರಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿರಿ ಎಂದು ಹೇಳಿದರು.