ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಿ

0
manvi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಪಾಲನೆ ಮಾಡಿದರೆ ಅಪಘಾತ ಹಾಗೂ ಇನ್ನಿತರ ಹಾನಿಗಳನ್ನು ತಡೆಗಟ್ಟಲು ಸಾಧ್ಯವಿದೆ. ಮೊದಲು ವಿದ್ಯಾರ್ಥಿಗಳು ಜಾಗೃತರಾಗಿ ಎಂದು ಬೆಟಗೇರಿ ಬಡಾವಣೆ ಠಾಣೆಯ ಸಿಪಿಐ ಧೀರಜ್ ಶಿಂಧೆ ಹೇಳಿದರು.

Advertisement

ನಗರದ ಕೆಎಲ್‌ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ `ರಾಷ್ಟ್ರೀಯ ರಸ್ತೆ ಸುರಕ್ಷತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಹನಗಳನ್ನು ಓಡಿಸುವ ಮುನ್ನ ವಾಹನ ಪರವಾನಗಿ, ವಾಹನ ವಿಮೆ, ದಾಖಲಾತಿಗಳನ್ನು ಹೊಂದಿರಬೇಕು.

ಅಲ್ಲದೆ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಿದೆ.

ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ಸಂಚಾರದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಹಂತದಿಂದಲೇ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಿದರೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಗದಗ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಶಕುಂತಲಾ ನಾಯ್ಕ, ಕಾಲೇಜಿನ ಪ್ರಾಚಾರ್ಯ ಜೈಹನುಮಾನ ಎಚ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಡಾ. ವಿಜಯ ಮುರದಂಡೆ, ಡಾ. ಸಂತೋಷ ಪಾಟೀಲ, ಡಾ. ಜ್ಯೋತಿ ಸಿ.ವಿ., ಎಸ್.ಟಿ. ಮುರಶಿಳ್ಳಿನ, ಶರತ್ ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೈಹಿಕ ನಿರ್ದೇಶಕ ಡಾ. ಸಿ.ಬಿ. ರಣಗಟ್ಟಿಮಠ ಸ್ವಾಗತಿಸಿದರು.

ವಿದ್ಯಾರ್ಥಿಗಳಾದ ಸ್ಪರ್ಶ ಜೈನ್ ಪ್ರಾರ್ಥಿಸಿದರು. ಚೆನ್ನಬಸಪ್ಪ ನಿರೂಪಿಸಿದರು. ಮುಕ್ತಾ ಹಡಪದ ವಂದಿಸಿದರು.

ರಸ್ತೆ ಸುರಕ್ಷತೆ ಬಗ್ಗೆ ಇರುವ ನಿಯಮಗಳನ್ನು ಪಾಲನೆ ಮಾಡಿದರೆ ಬಹಳಷ್ಟು ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಿದೆ. ಅಲ್ಲದೆ, ಎಲ್ಲರೂ ರಸ್ತೆಯ ನಿಯಮಗಳ ಬಗ್ಗೆ ಅರಿವು ಹೊಂದಿ ವಾಹನ ಚಾಲನೆ ಮಾಡಬೇಕು. ಪಾದಚಾರಿಗಳು ಸಹ ರಸ್ತೆ ದಾಟುವಾಗ ವಾಹನಗಳು ಬರುತ್ತಿರುವುದನ್ನು ನೋಡಿ, ಸಿಗ್ನಲ್‌ಗಳನ್ನು ಗಮನಿಸಿ, ವಿದ್ಯಾರ್ಥಿಗಳು ೧೮ ವರ್ಷ ತುಂಬಿದ ಬಳಿಕ ವಾಹನ ಚಾಲನೆ ಪರವಾನಗಿ ಪಡೆದು, ಸವಾರಿ ಮಾಡುವುದು ಒಳಿತು ಎಂದು ಧೀರಜ್ ಶಿಂಧೆ ಕಿವಿಮಾತು ಹೇಳಿದರು.


Spread the love

LEAVE A REPLY

Please enter your comment!
Please enter your name here