ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯನ ಜೀವ ಅತ್ಯಮೂಲ್ಯವಾಗಿದ್ದು, ವಾಹನ ಚಲಾಯಿಸುವ ಪ್ರತಿಯೊಬ್ಬರೂ ತಪ್ಪದೇ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತ, ಸಾವು-ನೋವು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಅರುಣ ಕಟ್ಟಿಮನಿ ಹೇಳಿದರು.
ಅವರು ಬುಧವಾರ ಲಕ್ಷ್ಮೇಶ್ವರದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ ಕಾರ್ಯಕ್ರಮದಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಷ್ಕಾಳಜಿ ಮತ್ತು ಬೇಜಾವಾಬ್ದಾರಿಯಿಂದ ಅಪಘಾತಗಳು ಹೆಚ್ಚುತ್ತಿವೆ. ವಾಹನ ಚಲಾಯಿಸುವಾಗ ರಸ್ತೆ ನಿಯಮಗಳನ್ನು ಪಾಲಿಸಿ, ಏಕಚಿತ್ತದಿಂದ ವಾಹನ ಚಲಾಯಿಸಬೇಕು. ಹೆಲ್ಮೆಟ್, ಸೀಟ್‌ಬೆಲ್ಟ್ ತಪ್ಪದೇ ಧರಿಸಬೇಕು. ರಸ್ತೆ ನಿಯಮ, ಸಂಜ್ಞೆ/ಸನ್ನೆಗಳನ್ನು ಪಾಲಿಸಬೇಕು. ವಾಹನ ಚಲಾಯಿಸುವಾಗ ಮದ್ಯಪಾನ ಮಾಡಲೇಬಾರದು. ಫೋನ್, ಸೌಂಡ್ ಸಿಸ್ಟಂ ಬಳಸಬೇಡಿ, ವಾಹನದ ಹಿಂದುಗಡೆ ರೇಡಿಯಂ ಸ್ಟಿಕ್ಕರ್ ಹಚ್ಚಿ. ಅಲಂಕಾರಿಕ ವಸ್ತುಗಳನ್ನು ಬಳಸಬೇಡಿ. ಪರಿಪೂರ್ಣ ದಾಖಲಾತಿಗಳು ಇರಲಿ. ಓವರ್ ಸ್ಪೀಡ್, ಓವರ್ ಕಾನ್ಫಿಡೆನ್ಸ್ ಅಪಘಾತಕ್ಕೆ ಪ್ರಮುಖ ಕಾರಣವಾಗಿದ್ದು, ವಾಹನ ಸವಾರರು ಇದನ್ನು ಪಾಲಿಸಬೇಕು.
ರಸ್ತೆ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್, ಶಿಕ್ಷಣ ಇತರೇ ಇಲಾಖೆಗಳ ಸಹಯೋಗದಲ್ಲಿ ಈ ತಿಂಗಳು ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಮತ್ತು ಸ್ವಯಂ ಪಾಲನೆ ಮಾಡಬೇಕು ಎಂದರು.
ಈ ವೇಳೆ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಹಿರಿಯ ಪತ್ರಕರ್ತರಾದ ರಮೇಶ ನಾಡಗೇರ, ದಿಗಂಬರ ಪೂಜಾರ, ರೈತರು, ವಾಹನ ಚಾಲಕರು, ಸಿಬ್ಬಂದಿ ಇದ್ದರು.



