ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಇದರಿಂದ ಸವಾರರು ಅಪಘಾತಗಳಿಂದ, ಜೀವ ಹಾನಿಯಾಗುವದರಿಂದ ಸುರಕ್ಷಿತವಾಗಿರಬಹುದು ಎಂದು ರೋಣ ಶಾಸಕ, ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ದುರ್ಗಾ ವೃತ್ತದಲ್ಲಿ ಪೊಲೀಸ್ ಇಲಾಖೆ ಅಳವಡಿಸಿರುವ `ಥರ್ಡ್ ಐ’ ಕಾರ್ಯಾಚರಣೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸರ್ವೇ ಸಾಮಾನ್ಯವಾಗಿದೆ. ಎಷ್ಟೇ ಜನ ಪೊಲೀಸರಿದ್ದರೂ ನಿಯಮ ಉಲ್ಲಂಘಿಸುವ ಸವಾರರು ಅವರ ಕಣ್ತಪ್ಪಿಸಿ ಓಡಾಡುವುದನ್ನು ಕಾಣುತ್ತೇವೆ. ಈ ಕ್ಯಾಮೆರಾದಿಂದ ಅಂತಹ ಸವಾರರನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ಅಲ್ಲದೆ ಇದು ಅನೇಕ ಅಪರಾಧಗಳ, ಅಪರಾಧಿಗಳ ಪತ್ತೆಗೂ ಸಹಾಯ ಮಾಡುತ್ತದೆ. ವಾಹನ ಸವಾರರು ಇನ್ನು ಮುಂದೆ ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ಓಡಾಡದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕಿಕೊಂಡು, ಕಾರ್ ಚಾಲಕರು ಸೀಟ್ ಬೆಲ್ಟ್ಗಳನ್ನು ಹಾಕಿಕೊಂಡು ಓಡಾಡಬೇಕು. ಇದರಿಂದ ನಿಮ್ಮ ಕುಟುಂಬದವರು ನೆಮ್ಮದಿಯಿಂದ ಇರಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಂಕರಗೌಡ ಪಾಟೀಲ, ಅಂದಾನಗೌಡ ಮಲ್ಲನಗೌಡ್ರ, ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಬಾಳಪ್ಪ ಸೋಮಗೊಂಡ, ಕಳಕನಗೌಡ ಪಾಟೀಲ, ನಿವೃತ್ತ ಶಿಕ್ಷಕ ಎ.ಎ. ನವಲಗುಂದ, ಅಲ್ಲಾಭಕ್ಷಿ ನದಾಫ್, ಶೇಕಪ್ಪ ಕೆಂಗಾರ, ಶೇಕಪ್ಪ ಜುಟ್ಲ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಸೇರಿದಂತೆ ನೂರಾರು ನಾಗರಿಕರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಮಾತನಾಡಿ, ಅನಗತ್ಯವಾಗಿ ಶಿಕ್ಷಿಸಲು ಈ ಕ್ಯಾಮೆರಾವನ್ನು ಅಳವಡಿಸಿಲ್ಲ. ವಾಹನವೆಂದ ಮೇಲೆ ಅಪಘಾತಗಳು ಸರ್ವೇ ಸಾಮಾನ್ಯ. ಈ ಅಪಘಾತಗಳು ಹೇಗಾಯಿತು, ಯಾರು ಮಾಡಿದರು ಎಂಬುದನ್ನು ತಿಳಿಯುವುದಕ್ಕಾಗಿ, ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಕ್ಕಾಗಿ ಯಾರೂ ಭಯ ಪಡಬೇಕಿಲ್ಲ. ಹಾಗೆಂದು ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಓಡಾಡಿದರೆ, ಸೀಟ್ ಬೆಲ್ಟ್ ಇಲ್ಲದೆ ಕಾರ್ ಚಾಲನೆ ಮಾಡಿದರೆ ದಂಡ ತೆರಬೇಕಾಗುತ್ತದೆ. ನಿಮ್ಮ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಮಾಡಿರುವ ಈ ಹೊಸ ವ್ಯವಸ್ಥೆಗೆ ನೀವೆಲ್ಲರೂ ಹೊಂದಿಕೊಳ್ಳಬೇಕೆಂದು ತಿಳಿಸಿದರು.


