ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮತ್ತೋರ್ವ ಮಹಿಳಾ ಸ್ಪರ್ಧಿ ಗಂಭೀರ ಆರೋಪ ಮಾಡಿದ್ದರು. ಮಡೆನೂರು ಮನು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿದ್ದರು. ಈ ಬೆನ್ನಲ್ಲೇ ಇದೇ ಸೀಸನ್ನಲ್ಲಿ ಇದ್ದ ಅಪ್ಪಣ್ಣ ರಾಮದುರ್ಗ ಮೇಲೆ ಅವರು ಆರೋಪ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಅಪ್ಪಣ್ಣ ಸ್ಪಷ್ಟನೆ ನೀಡಿದ್ದಾರೆ.
2018ರಿಂದ ಮಡೆನೂರು ಮನು ಸಂತ್ರಸ್ತೆಗೆ ಪರಿಚಯ. ಆ ಬಳಿಕ ಇಬ್ಬರ ನಡುವೆ ಆಪ್ತತೆ ಬೆಳೆದಿದ್ದು, 2022ರಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮನು ವಿರುದ್ಧ ಸಂತ್ರಸ್ತೆ ದೂರಿದ್ದಾರೆ. ಅಲ್ಲದೆ, ಒತ್ತಾಯಪೂರ್ವಕವಾಗಿ ತಾಳಿ ಕಟ್ಟಿದ್ದಾಗಿಯೂ ಹೇಳಿದ್ದಾರೆ. ಅವರ ದೂರನ್ನು ಆಧರಿಸಿ ಮನು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಅವರನ್ನು ಕೋರ್ಟ್ ಎದುರು ಹಾಜರುಪಡಿಸೋ ಸಾಧ್ಯತೆ ಇದ್ದು, ಇದೀಗ ಸಂತ್ರಸ್ತೆ ಮಾಡಿರೋ ಹೊಸ ಆರೋಪದ ಆಡಿಯೋ ವೈರಲ್ ಆಗಿದೆ.
‘ನನಗೆ ಕಾಮಿಡಿ ಕಿಲಾಡಿಗಳು ಅಪ್ಪಣ್ಣ ರಾಮದುರ್ಗ ಅಂತ ಇದಾನೆ. ಎರಡನೇ ಸೀಸನ್ನಿಂದ ತೊಂದರೆ ಕೊಡುತ್ತಾ ಇದ್ದ. ಶೋಗೆ ಕರೆದು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾನೆ. ಅವನ ಕಾಟ ಇನ್ನೂ ತಪ್ಪಿಲ್ಲ. ದಿನವೂ ಅವನ ಕಾಟ ಹೆಚ್ಚುತ್ತಿದೆ. ನನ್ನ ಹಾಗೂ ಬಾಯ್ಫ್ರೆಂಡ್ ಅಲೋಕ ಮಧ್ಯೆ ಬ್ರೇಕಪ್ ಆಗಿದೆ. ಇದಕ್ಕೆ ಕಾರಣ ಅಪ್ಪಣ್ಣ. ನಾನು ಆತ್ಮಹತ್ಯೆ ಮಾಡಿಕೊಂಡರೆ ಅವನೇ ಕಾರಣ. ಅವನ ಸುಮ್ಮನೆ ಬಿಡಬೇಡಿ’ ಎಂದು ಸಂತ್ರಸ್ತೆ ಹೇಳಿರೋ ಆಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ಆಡಿಯೋಗೆ ಸ್ಪಷ್ಟನೆ ನೀಡಿರುವ ಅಪ್ಪಣ್ಣ, ‘ಒಂದೂವರೆ ವರ್ಷದ ಹಿಂದೆ ನಾನು ಅವರ ಸಂಪರ್ಕದಲ್ಲಿ ಇದ್ದಿದ್ದು ನಿಜ. ಆದರೆ, ಆ ಬಳಿಕ ಅವರ ಸಂಪರ್ಕ ಇಲ್ಲ. ಈ ರೀತಿ ಮಾತನಾಡು ಎಂದು ಮನು ಒತ್ತಾಯ ಪೂರ್ವಕವಾಗಿ ಆಕೆಯ (ಸಂತಸ್ತೆ) ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.