HomeGadag Newsಪಿಡಿಎಸ್ ಅಕ್ಕಿ ಕಳ್ಳರ ಬೆನ್ನತ್ತಿದ ಆಹಾರ ಇಲಾಖೆ ಅಧಿಕಾರಿ: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ!

ಪಿಡಿಎಸ್ ಅಕ್ಕಿ ಕಳ್ಳರ ಬೆನ್ನತ್ತಿದ ಆಹಾರ ಇಲಾಖೆ ಅಧಿಕಾರಿ: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ!

For Dai;y Updates Join Our whatsapp Group

Spread the love

ರೋಣ: ಬಡವರ ಹೊಟ್ಟೆ ತುಂಬಬೇಕಿದ್ದ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಗೆ ಸಾಗಿಸಲು ಯತ್ನಿಸುತ್ತಿದ್ದ ಜಾಲದ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಲೆಗೆ ಬೀಳಿಸಿರುವ ಘಟನೆ ರೋಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಜೂನ್ 18ರಂದು ಬೆಳಿಗ್ಗೆ ರೋಣ-ನರಗುಂದ ರಸ್ತೆಯ ಬಸಲಾಪುರ ಕ್ರಾಸ್ ಬಳಿ ದಾಳಿ ನಡೆಸಲಾಯಿತು. ಈ ವೇಳೆ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿಯ ವೇಳೆ ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ನಾಗಪ್ಪ ಭಜಂತ್ರಿ (29) ಹಾಗೂ ಗದಗ-ಬೆಟಗೇರಿಯ ಶ್ರೀಕಾಂತ ಭಜಂತ್ರಿ ಎಂಬುವರು ಬಡವರಿಗೆ ಸರ್ಕಾರ ವಿತರಿಸುವ ಪಿಡಿಎಸ್ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಗೆ ಸಾಗಿಸುತ್ತಿರುವುದು ಪತ್ತೆಯಾಗಿದೆ. ಅಧಿಕಾರಿಗಳು ತಕ್ಷಣವೇ ಆಟೋ ತಡೆದು ಪರಿಶೀಲನೆ ನಡೆಸಿದಾಗ 15 ಚೀಲಗಳಲ್ಲಿ ತುಂಬಿದ್ದ ಅಕ್ಕಿ ಪತ್ತೆಯಾಯಿತು.

ತನಿಖೆಯಲ್ಲಿ ಒಟ್ಟು 6 ಕ್ವಿಂಟಲ್ 10 ಕೆ.ಜಿ. ಪಿಡಿಎಸ್ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ. ಸರ್ಕಾರದ ಯೋಜನೆಯಡಿ ಬಡ ಕುಟುಂಬಗಳಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಮಧ್ಯವರ್ತಿಗಳ ಮೂಲಕ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರೆಂಬ ಶಂಕೆ ವ್ಯಕ್ತವಾಗಿದೆ.

ದಾಳಿಯಲ್ಲಿ ₹13,725 ಮೌಲ್ಯದ 15 ಅಕ್ಕಿ ಚೀಲಗಳು, ₹1.50 ಲಕ್ಷ ಮೌಲ್ಯದ ಆಟೋ ರಿಕ್ಷಾ (ಕೆಎ-26/ಬಿ-6642) ಹಾಗೂ ಅಕ್ಕಿಯ ಮಾದರಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು ₹1,63,837 ಮೌಲ್ಯದ ವಸ್ತುಗಳು ಅಧಿಕಾರಿಗಳ ವಶಕ್ಕೆ ಬಂದಿವೆ.

ಆಹಾರ ಇಲಾಖೆ ಅಧಿಕಾರಿಗಳ ದೂರಿನ ಮೇರೆಗೆ ರೋಣ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ-1955 ಹಾಗೂ ಪಿಡಿಎಸ್ ನಿಯಂತ್ರಣ ಆದೇಶ-1992ರ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ದಾಳಿಯ ರೂವಾರಿ ಸುವರ್ಣ ಜಮ್ಮನಕಟ್ಟಿ;

ಪಿಡಿಎಸ್ ಅಕ್ಕಿಯ ಅಕ್ರಮ ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿದ ರೋಣದ ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು. ಅವರ ಚುರುಕು ಕಾರ್ಯಾಚರಣೆಯಿಂದ ಕಾಳಸಂತೆಗೆ ಸಾಗುತ್ತಿದ್ದ ಅಕ್ಕಿ ಜಾಲ ಬಯಲಿಗೆ ಬಂದಿದ್ದು, ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!