ಗದಗ:- ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ನಡೆಸುತ್ತಿರುವ ಪರದಾಟ ಹೇಳತ್ತೀರದ್ದಾಗಿದೆ.
ಅದರಲ್ಲೂ ಗದಗ ಜಿಲ್ಲೆಯಲ್ಲಿ ಯೂರಿಯಾ ಕೊರತೆ ಹೆಚ್ಚಾಗಿದ್ದು, ರೈತರು ಹಗಲು- ರಾತ್ರಿ ಎನ್ನದೇ ಕ್ಯೂ ನಿಂತು ಗೊಬ್ಬರಕ್ಕಾಗಿ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಗದಗದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಗಲಾಟೆ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಅಭಾವ ಉಂಟಾಗಿದೆ. ಯೂರಿಯಾ ಗೊಬ್ಬರಕ್ಕಾಗಿ ರೈತರು ನೂಕಾಟ, ತಳ್ಳಾಟ, ವಾಗ್ವಾದ ನಡೆಸಿರೋ ಪ್ರಸಂಗ ಕೂಡ ನಡೆದಿದೆ. ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರು ಕೈ ಕೈ ಮಿಲಾಯಿಸಿದ್ದಾರೆ. ಕದಾಂಪೂರ ಗ್ರಾಮದ ರೈತ ಮಿತ್ರ ಕೃಷಿ ಸೇವಾ ಕೇಂದ್ರದ ಎದುರು ಗಲಾಟೆ ನಡೆದಿದೆ. ಯೂರಿಯಾ ಗೊಬ್ಬರಕ್ಕಾಗಿ ಕಿಲೋಮೀಟರ್ ಉದ್ದಕ್ಕೆ ಸರತಿ ಸಾಲು ಇತ್ತು. ಈ ವೇಳೆ ಗೊಬ್ಬರ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ. ಆಗ ರೈತರ ನಡುವೆ ನೂಕಾಟ, ತಳ್ಳಾಟ, ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ರೈತರು ಕೈ ಕೈ ಮಿಲಾಯಿಸಿದ್ದಾರೆ.
ಬಳಿಕ ಸ್ಥಳದಲ್ಲೇ ಇದ್ದ ಪೊಲೀಸರು ಮಧ್ಯ ಪ್ರವೇಶ ಮಾಡಿ, ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಪೊಲೀಸ್ ಕಾವಲಿನಲ್ಲಿ ಗೊಬ್ಬರ ವಿತರಣೆ ಮಾಡಲಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದೆ. ಕೃಷಿ ಅಧಿಕಾರಿಗಳ ವಿರುದ್ಧ ಅನ್ನದಾತರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.