ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
75 ಲಕ್ಷ ಅನುದಾನದಲ್ಲಿ ನಾಗಾವಿ ಗ್ರಾಮದ ಹಿರೇಕೇರಿ ಹಾಗೂ ಭೂಕೈಯ್ಯನ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ನಂತರ ಸಚಿವರು ಮುಳಗುಂದದಲ್ಲಿನ ಅಬ್ಬಿಗೆರೆ ಕೆರೆ ಕಾಮಗಾರಿಗೆ 2 ಕೋಟಿ ರೂ ಅನುದಾನ ಒದಗಿಸಲಾಗಿದ್ದು, ಕೆರೆ ಕಾಮಗಾರಿಯಿಂದ ನಗರದಲ್ಲಿನ ಕೆರೆ ಸುತ್ತಲಿನ ಪ್ರದೇಶ ಸುಂದರವಾಗಿ ಕಂಗೊಳಿಸುವಂತಾಗಬೇಕು ಎಂದರು.
ಕುರ್ತಕೋಟೆಯಲ್ಲಿ 65 ಲಕ್ಷ ರೂ ಅನುದಾನದಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿಪಡಿಸಿದ ಅವಧಿಯೊಳಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಬೇಕೆಂದು ತಿಳಿಸಿದರು.
ಅಂತೂರ-ಬೆಂತೂರು ಗ್ರಾಮದಲ್ಲಿರುವ ಕೆರೆಯು ಸುಂದರ ಸ್ಥಳದಲ್ಲಿದ್ದು, ಇದನ್ನು ಇನ್ನಷ್ಟು ಸುಂದರಗೊಳಿಸಲು 1 ಕೋಟಿ ರೂ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಕಾಮಗಾರಿಯು ಮುಂಬರುವ ಸಂಕ್ರಮಣದೊಳಗಾಗಿ ಪೂರ್ಣಗೊಳಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ ಸೇರಿದಂತೆ ನಾಗಾವಿ, ಮುಳುಗುಂದ, ಕುರ್ತಕೋಟಿ, ಅಂತೂರ್-ಬೆಂತೂರ್ ಗ್ರಾಮದ ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಹಾಜರಿದ್ದರು.