ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ. ಟಿ.ಎನ್. ಗೋಡಿಯವರು ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ, ಪ್ರಾಚಾರ್ಯರಾಗಿ 36 ವರ್ಷಗಳ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿಮಿತ್ತ ಅರುಣೋದಯ ವಾಯು ವಿಹಾರಿಗಳ ವಿವಿಧೋದ್ದೇಶಗಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಗೋಡಿ ದಂಪತಿಗಳನ್ನು ಸನ್ಮಾನಿಸಿದರು.
ಸಂಘದ ನಿರ್ದೇಶಕ ಪ್ರೊ. ಬಿ.ಬಿ. ಮಾಲಗಿತ್ತಿ ಮಾತನಾಡಿ, ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುವ ಭಾವನೆ ನಮ್ಮೆಲ್ಲರಲ್ಲಿ ಬೆಳೆಯಬೇಕು ಹಾಗೂ ಪ್ರಾಚೀನತೆಯ ಜೊತೆಗೆ ಆಧುನಿಕತೆಯ ಅರಿವು ಮೂಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವಾಯ್.ಕೆ. ಪಿಡಗಣ್ಣವರ ಮಾತನಾಡಿ, ನಮ್ಮ ಬದುಕು ಶಾಶ್ವತವಲ್ಲ. ಗಳಿಸಿದ ಸಿರಿ-ಸಂಪತ್ತು ಶಾಶ್ವತವಲ್ಲ. ಒಳ್ಳೆಯ ಗುಣ, ಉತ್ತಮ ಸಂಬಂಧ ಜೀವನದ ನಿಜವಾದ ಆಸ್ತಿ. ಹೀಗಾಗಿ ನಾವೆಲ್ಲರೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಮತ್ತು ಬದುಕು ಬಲಗೊಳ್ಳಲು ಸಂಸ್ಕೃತಿ, ಸಂಸ್ಕಾರ ಹೊಂದುವುದು ಅವಶ್ಯ. ಇವೆಲ್ಲವುಗಳನ್ನು ಮೈಗೂಡಿಸಿಕೊಂಡಿರುವ ಡಾ. ಟಿ.ಎನ್. ಗೋಡಿಯವರ ನಿವೃತ್ತ ಜೀವನ ಸುಖಮಯವಾಗಲೆಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಟಿ.ಎನ್. ಗೋಡಿ, ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ನಮ್ಮ ನಿವಾಸಕ್ಕೆ ಆಗಮಿಸಿ ಸನ್ಮಾನಿಸಿದ್ದು ತುಂಬಾ ಸಂತೋಷದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಎಂ.ಬಿ. ಕರಿಬಿಷ್ಠಿ, ನಿರ್ದೇಶಕರಾದ ಶೈಲಪ್ಪ ಅಂಗಡಿ, ಅಶೋಕ ವಡವಡಗಿ, ಸದಸ್ಯರುಗಳಾದ ಎಸ್.ಎಂ. ಯಂಡಿಗೇರಿ, ಜಿ.ಬಿ. ಚನ್ನಪ್ಪಗೌಡ್ರ, ಜಿ.ಬಿ. ಡೊನ್ನಿ ಮುಂತಾದವರು ಪಾಲ್ಗೊಂಡಿದ್ದರು. ಸಂಘದ ನಿರ್ದೇಶಕ ಹೆಚ್.ಎನ್. ಚಿಗರಿ ವಂದಿಸಿದರು.