HomeGadag Newsದೇಶ ಶ್ರೇಷ್ಠವಾಗಲು ಎಲ್ಲರೂ ಸುಶಿಕ್ಷಿತರಾಗಬೇಕು

ದೇಶ ಶ್ರೇಷ್ಠವಾಗಲು ಎಲ್ಲರೂ ಸುಶಿಕ್ಷಿತರಾಗಬೇಕು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ಬಿಟ್ಟ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಗದಗ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಾರ್ಯಾಲಯ ಮತ್ತು ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಗದಗ ನಗರದ ಸಿದ್ಧಲಿಂಗ ನಗರದ ಪ್ರೌಢಶಾಲೆ ಆವರಣದಲ್ಲಿ ಜೂನ್ 2ರಂದು ಜರುಗಿದ `ಭವ್ಯ ಭವಿಷ್ಯದ ನಾಳೆ-ಬನ್ನಿ ಬನ್ನಿ ಶಾಲೆಗೆ’ ಘೋಷ ವಾಕ್ಯದಡಿ ಏರ್ಪಡಿಸಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿದರು.

ದೇಶ ಶ್ರೇಷ್ಠವಾಗಲು ಎಲ್ಲರೂ ಶಿಕ್ಷಣವಂತರಾಗುವ ಜೊತೆಗೆ ಸುಶಿಕ್ಷಿತರಾಗಬೇಕು. ಶಾಲೆಯಿಂದ ಹೊರಗುಳಿದ 6-14 ವಯೋಮಾನದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಮೂಲಕ ಶಿಕ್ಷಣ ನೀಡಬೇಕು. ಮಕ್ಕಳೆಲ್ಲರೂ ತಮ್ಮ ಭವ್ಯ ಭವಿಷ್ಯ ನಿರ್ಮಾಣಕ್ಕಾಗಿ ಶಾಲೆಗೆ ಬನ್ನಿ ಎಂದು ಸಚಿವ ಎಚ್.ಕೆ. ಪಾಟೀಲ ಮಕ್ಕಳಿಗೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಕ್ಕಳು ಶಿಕ್ಷಣವಂತರಾಗುವಲ್ಲಿ ಸರ್ಕಾರದೊಂದಿಗೆ ನಾಗರಿಕ ಹೊಣೆಗಾರಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಭವಿಷ್ಯ ಶಾಲೆಯಲ್ಲಿ ಸುರಕ್ಷಿತವಾಗಲಿದೆ. ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಲು ಶಾಲೆ ಸದಾ ಸಿದ್ಧವಾಗಿವೆ. ಮರಳಿ ಶಾಲೆಗೆ ಬರುವ ಮೂಲಕ ಕಲಿತು ಬೆಳೆಯಬೇಕು ಎಂದು ತಿಳಿಸಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ವಿವಿಧ ಇಲಾಖೆ, ಸಂಘ ಸಂಸ್ಥೆಗಳೊಂದಿಗೆ ಗದಗ ಶಹರ ವಲಯದಲ್ಲಿ ಜಾಗೃತಿ ಆಂದೋಲನ ಮಾಡುವ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವೇದಿಕೆಯಲ್ಲಿ ಹೂಗುಚ್ಛ ನೀಡಿ ಸಚಿವರು, ಶಾಸಕರು, ಗಣ್ಯರು ಸ್ವಾಗತಿಸಿದರು. ಇಲಾಖೆಯಿಂದ ಹೊರತರಲಾದ ಕರಪತ್ರಗಳ ಬಿಡುಗಡೆ ಮಾಡಲಾಯಿತು. ಜೊತೆಗೆ ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಶಾಲಾ ಸಮವಸ್ತ್ರ ವಿತರಣೆ ಜರುಗಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗುರಣ್ಣ ಬಳಗಾನೂರ, ಎಸ್.ಎನ್. ಬಳಗಾನೂರ, ಬಸವರಾಜ ಧಾರವಾಡ, ಶಿವಕುಮಾರ ಕುರಿ, ಆಂಜನೇಯ ಕಟಗಿ ಸೇರಿದಂತೆ ಸರ್ಕಾರಿ ಪ್ರೌಢಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

`ಭವ್ಯ ಭವಿಷ್ಯದ ನಾಳೆಗೆ-ಬನ್ನಿ ಬನ್ನಿ ಶಾಲೆಗೆ’ ಕಾರ್ಯಕ್ರಮದ ಅಂಗವಾಗಿ ಸಚಿವ ಎಚ್.ಕೆ. ಪಾಟೀಲ ಅವರು ಗದುಗಿನ ರಾಮನಗರದಲ್ಲಿನ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡುವ ಮೂಲಕ ಶಾಲೆಯಿಂದ ಹೊರಗುಳಿದ ಏಳು ಮಕ್ಕಳನ್ನು ತಮ್ಮ ಕಾರಿನಲ್ಲಿ ಶಾಲೆಗೆ ಕರೆತರುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

“ಉತ್ತಮ ಜ್ಞಾನ ಹಾಗೂ ಕೌಶಲ್ಯಗಳ ಅಭಿವೃದ್ಧಿ, ಸೃಜನಾತ್ಮಕತೆ ಮತ್ತು ವಿಮರ್ಶಾತ್ಮಕ ಚಿಂತನೆಗಳ ಬೆಳವಣಿಗೆ, ಸಾಮಾಜಿಕ ಮತ್ತು ಭಾವನಾತ್ಮಕ ಮೌಲ್ಯಗಳ ಸುಧಾರಣೆ, ದೇಶಭಕ್ತಿ ಮತ್ತು ದೇಶಪ್ರೇಮ, ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವುದು, ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಶಿಕ್ಷಣ ಈ ಎಲ್ಲವುಗಳು ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಆಗುವ ಪ್ರಯೋಜನಗಳಾಗಿವೆ. ಜೊತೆಗೆ ಶಾಲೆಗೆ ಬರುವ ಮಕ್ಕಳಿಗೆ ಸರ್ಕಾರದಿಂದಲೇ ಸಮವಸ್ತ್ರ, ಪುಸ್ತಕ ಹಾಗೂ ಮಧ್ಯಾಹ್ನದ ಊಟ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುವುದು”

– ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!