ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಸಮುದಾಯದಲ್ಲಿ ಸಂತಸ ಮನೆ ಮಾಡಿದೆ.
ಅಧಿಕೃತ ಘೋಷಣೆಯಾಗುತ್ತಿದ್ದಂತೆಯೇ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ಧೂರಿಯಿಂದ ನಡೆಯಿತು. ಮತ್ತೊಮ್ಮೆ ಶಿರಹಟ್ಟಿ ಪ.ಪಂನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಅಲಂಕರಿಸಿತು.
ಶಿರಹಟ್ಟಿ ಪ.ಪಂ ವ್ಯಾಪ್ತಿಯಲ್ಲಿ ಬರುವ 18 ವಾರ್ಡುಗಳಲ್ಲಿ 11ರಲ್ಲಿ ಕಾಂಗ್ರೆಸ್ ಸದಸ್ಯರಿದ್ದು, ಬಿಜೆಪಿಯ 7 ಜನ ಸದಸ್ಯರಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಇಲ್ಲಿ ಪೂರ್ಣ ಬಹುಮತ ಹೊಂದಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳಿಗೂ ಸಾಮಾನ್ಯ ಮಹಿಳೆ ಮೀಸಲಾತಿ ಇತ್ತು. ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಾ.ನಂ.15ರ ದೇವಕ್ಕ ಗುಡಿಮನಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಾ.ನಂ.4ರ ನೀಲವ್ವ ಹುಬ್ಬಳ್ಳಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳು ಕ್ರಮಬದ್ಧವಾಗಿದ್ದರಿಂದ ಉಳಿದಂತೆ ಯಾವ ನಾಮಪತ್ರಗಳು ಸಲ್ಲಿಕೆಯಾಗದೇ ಇರುವುದರಿಂದ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ, ಅನಿಲ ಬಡಿಗೇರ ಮತ್ತು ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಮಧ್ಯಾಹ್ನ 2ರ ಸುಮಾರಿಗೆ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಸಮುದಾಯದ ವತಿಯಿಂದ ಮಹಿಳಾ ಸದಸ್ಯರು ಅಧ್ಯಕ್ಷರಾಗಬೇಕೆನ್ನುವ ಸುಮಾರು 50-60ವರ್ಷಗಳ ಕನಸು ಈಗ ನನಸಾಗಿದ್ದು, ಇದರಿಂದ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗಿದೆ. ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಸಮುದಾಯದ ಸದಸ್ಯೆಯೋರ್ವರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿಯೆನಿಸುತ್ತಿದೆ.
ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ನೂತನ ಅಧ್ಯಕ್ಷರು ಶ್ರಮಿಸುವ ವಿಶ್ವಾಸವಿದೆ ಎಂದು ಶಿರಹಟ್ಟಿ ಎಸ್‌ಸಿ ಬ್ಲಾಕ್ ಅಧ್ಯಕ್ಷ ಮುತ್ತುರಾಜ ಭಾವಿಮನಿ ಹೇಳಿದರು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆಯೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮುಖಂಡ ಗುರುನಾಥ ದಾನಪ್ಪನವರ, ಡಿ.ಕೆ. ಹೊನ್ನಪ್ಪನವರ, ಅಜ್ಜು ಪಾಟೀಲ, ಪರಮೇಶ ಪರಬ, ಹೊನ್ನಪ್ಪ ಶಿರಹಟ್ಟಿ, ಅಶ್ರತಅಲಿ ಢಾಲಾಯತ, ಮಂಜುನಾಥ ಘಂಟಿ, ಮಹಾಂತೇಶ ದಶಮನಿ, ರವಿ ಗುಡಿಮನಿ ಸೇರಿದಂತೆ ಇನ್ನೂ ಅನೇಕ ಮುಂಡರು ಆಗಮಿಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಯುವಕರು ತೆರೆದ ವಾಹನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಭವ್ಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸಲಾಯಿತು.