ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಸರ್ಕಾರದಿಂದ ಪ್ರತ್ಯೇಕ ಹೆರಿಗೆ ಆಸ್ಪತ್ರೆ, ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಉಸ್ತುವಾರಿ ಎಚ್.ಎಂ. ಸಂತೋಷ ಒತ್ತಾಯಿಸಿದರು.
ಪಟ್ಟಣದ ತಾಲೂಕು ವೈದ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪಕ್ಷದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಾಲೂಕು ವೈದ್ಯಾಧಿಕಾರಿ ಡಾ.ಹಾಲಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮದ ಅನ್ವಯ ಪ್ರತಿ ಗ್ರಾಮಗಳಿಗೆ ಒಂದು ಉಪಕೇಂದ್ರ ತೆರೆಯಬೇಕು. 26 ಗ್ರಾಮಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, 121 ಗ್ರಾಮಗಳಿಗೆ ಸಮುದಾಯ ಆರೋಗ್ಯ ಕೇಂದ್ರ ತೆರೆಯಬೇಕು. 4 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ತಾಲೂಕಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಹೆರಿಗೆ ಆಸ್ಪತ್ರೆ, ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಕೇಂದ್ರದ ಅವಶ್ಯಕತೆ ಇದೆ ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಇಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂ ನೀಡಿ ಸ್ಕ್ಯಾನಿಂಗ್ ಮಾಡಿಸುವ ಪರಿಸ್ಥಿತಿಯಿದೆ. ಖಾಲಿ ಇರುವ ವೈದ್ಯರ ಹುದ್ದೆ ಶೀಘ್ರ ಭರ್ತಿ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಬಳಿಗನೂರು ಕೊಟ್ರೇಶ್, ರಮೇಶ್ ನಾಯ್ಕ, ರಾಗಿಮಸಲವಾಡ ಹನುಮಂತಪ್ಪ, ಟಿ. ಬಸಮ್ಮ, ಎ.ಪಿ. ಪುಷ್ಪ, ವಿಶಾಲಮ್ಮ, ಡಿ.ಎಚ್. ಅರುಣ್, ಹಗರಿ ಗುಡಿಹಳ್ಳಿ ಶಿವರಾಜ್, ಎಚ್. ಬಸವರಾಜ್ ಇತರರಿದ್ದರು.



