HomeGadag Newsಮಳೆಗಾಲದ ಸಿದ್ಧತೆಗೆ ಮುನ್ಸೂಚನೆ

ಮಳೆಗಾಲದ ಸಿದ್ಧತೆಗೆ ಮುನ್ಸೂಚನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸೇರಿ ತಾಲೂಕಿನಾದ್ಯಂತ ಮಂಗಳವಾರ ಇಳಿ ಹೊತ್ತಿಗೆ ಜೋರಾದ ಗಾಳಿ, ಗುಡುಗು-ಸಿಡಿಲಬ್ಬರದೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಇಳೆ ತಂಪಾಗಿ ಬಿಸಿಲ ಬೇಗೆಯಿಂದ ಬಸವಳಿಯುತ್ತಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿಯೇ ಕೊಳಚೆ ನೀರು ಹರಿದು ಸಾರ್ವಜನಿಕರು ಸಂಚಾರಕ್ಕೆ ಪರದಾಡಿದರು. ಇನ್ನು ಬೆಣ್ಣೆಪೇಟೆ, ಬಸ್ತಿಬಣ, ಜನ್ನತ್ ನಗರ, ಈಶ್ವರ ನಗರ, ಲಕ್ಷ್ಮೀ ನಗರ, ಇಂದಿರಾನಗರ, ಬಸವೇಶ್ವರ ನಗರ ಸೇರಿ ಅನೇಕ ಕಡೆ ಚರಂಡಿಗಳೇ ಇಲ್ಲದಿರುವದರಿಂದ ಚರಂಡಿ ನೀರು ರಸ್ತೆಯ ಮೇಲೆ ನಿಂತು ಸಂಚಾರಕ್ಕೆ ತೊಂದರೆಯಾಯಿತು. ಜೋರಾದ ಗಾಳಿ-ಮಳೆಯಿಂದ ತಾಲೂಕಿನ ಒಡೆಯರ ಮಲ್ಲಾಪುರ, ರಾಮಗೇರಿ ಭಾಗದಲ್ಲಿ ವಿದ್ಯುತ್ ಕಂಬಗಳು ಮತ್ತು ಅನೇಕ ಕಡೆ ಮರಗಳು ಧರೆಗುರುಳಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತವಾಗಿ ಸಾರ್ವಜನಿಕರು ತೊಂದರೆಪಟ್ಟರು. ಮಳೆಯ ನಡುವೆಯೂ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ಸಿಬ್ಬಂದಿಗಳು ಹರಸಾಹಸಪಟ್ಟರು.

ಒಟ್ಟಿನಲ್ಲಿ ಮುಂಗಾರು ಪೂರ್ವದ ಮೊದಲ ಮಳೆ ಆವಾಂತರನ್ನೇ ಸೃಷ್ಟಿಸಿದೆ. ಇದು ತಹಸೀಲ್ದಾರ, ತಾ.ಪಂ ಇಓ, ಸ್ಥಳೀಯ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಳೆಗಾಲದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಎಚ್ಚರಿಸಿದಂತಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯಪೃವೃತ್ತರಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೇ ಜಾನುವಾರುಗಳು, ಕುರಿ-ಮೇಕೆಗಳು ನೀರಿಗಾಗಿ ಪರಿತಪಿಸುವಂತಹ ಸಂದರ್ಭದಲ್ಲಿ ಸುರಿದ ಈ ಮಳೆಯಿಂದ ತಾತ್ಕಾಲಿಕ ಉಪಶಮನವನ್ನುಂಟುಮಾಡಿತು. ಅಲ್ಲದೇ ಕಾದು ಕಬ್ಬಿಣದಂತಾಗಿದ್ದ ಭೂಮಿಯಲ್ಲಿ ರಂಟೆ-ಕುಂಟೆಯಿಂದ ಉಳುಮೆ ಮಾಡಲಾಗದೇ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದ ರೈತರು ಮಾಗಿ ಉಳುಮೆ ಮಾಡಲು ಅನಕೂಲವಾಯಿತು. ಇನ್ನು ಹಿಂಗಾರಿನ ಒಕ್ಕಲಿ ತಡವಾದ ಮಾಡುತ್ತಿರುವ ರೈತರಿಗೆ, ಹೊಟ್ಟು-ಮೇಲು ಬಣವಿ ನಿರ್ಮಿಸಲು ಸಿದ್ದಪಡಿಸಿಕೊಂಡವರಿಗೆ ಮಳೆಯಿಂದ ಕೊಂಚ ತೊಂದರೆಯೂ ಆಗಿದೆ. ಒಟ್ಟಿನಲ್ಲಿ ಮಳೆ ಬಂದರೆ ಕೇಡಲ್ಲ.. ಎಂಬ ಗಾದೆ ಮಾತಿನಂತೆ ಕಳೆದ 3-4 ದಿನಗಳಿಂದ ಆಗುತ್ತಿರುವ ಮಳೆ ಭೂಮಿಯನ್ನು ತಂಪಾಗಿಸುವ ಜೊತೆಗೆ ಜನರ ನೆಮ್ಮದಿಗೂ ಕಾರಣವಾಗಿದೆ.

ಪಟ್ಟಣ ಸೇರಿ ತಾಲೂಕಿನಾದ್ಯಂತ ತಗ್ಗು-ಗುಂಡಿಗಳಿಂದ ಕೂಡಿದ್ದ ಬಹುತೇಕ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಸಂಚಾರಕ್ಕೆ ಪರದಾಡಿದರು. ಪಟ್ಟಣದಲ್ಲಿನ ಬಹುತೇಕ ರಸ್ತೆಗಳ ಸ್ಥಿತಿಯನ್ನು ಮುಂಗಾರು ಪೂರ್ವದ ಈ ಮಳೆ ಬಿಂಬಿಸಿತ್ತು. ರಸ್ತೆಗಳ ಕೆಟ್ಟ ಸ್ಥಿತಿ ಕಂಡ ಜನರು ಪುರಸಭೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!