HomeGadag Newsಅರಣ್ಯ ಸಂರಕ್ಷಕರು ನಾಡಿನ ಹಸಿರಿನ ಹರಿಕಾರರು: ಸತ್ರ ನ್ಯಾಯಾಧೀಶರಾದ ಗಂಗಾಧರ ಎಂ.ಸಿ

ಅರಣ್ಯ ಸಂರಕ್ಷಕರು ನಾಡಿನ ಹಸಿರಿನ ಹರಿಕಾರರು: ಸತ್ರ ನ್ಯಾಯಾಧೀಶರಾದ ಗಂಗಾಧರ ಎಂ.ಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಹಸಿರಿನ ನಿಜವಾದ ಹರಿಕಾರರು ಅರಣ್ಯ ಸಂರಕ್ಷಕರು. ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಲು ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರ ತ್ಯಾಗ–ಬಲಿದಾನಗಳನ್ನು ನಾವೆಲ್ಲರೂ ನೆನೆಯುವ ಮೂಲಕ ಅರಣ್ಯ ಸಂರಕ್ಷಣೆಗೆ ಶ್ರಮಿಸಿದ ಸರ್ವರಿಗೂ ಆಭಾರಿಗಳಾಗಿರೋಣ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ ಎಂ.ಸಿ ಹೇಳಿದರು.

ಗದುಗಿನ ಬಿಂಕದಕಟ್ಟಿಯಲ್ಲಿ ಗುರುವಾರ ಅರಣ್ಯ ಇಲಾಖೆಯಿಂದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಜರುಗಿದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಹುತಾತ್ಮರನ್ನು ಕೇವಲ ಸ್ಮರಿಸುವ ದಿನವಲ್ಲ. ಜೊತೆಗೆ ನಾವೆಲ್ಲರೂ ಪರಿಸರ ಸಂರಕ್ಷಣೆಯ ಹೊಣೆ ಹೊರುವ ದಿನವಾಗಿದೆ. ನಿರಂತರವಾಗಿ ನಡೆಯುವ ಅಕ್ರಮ ಪ್ರಾಣಿ ಬೇಟೆ ತಡೆಯಬೇಕು. ಪ್ರಕೃತಿಯಲ್ಲಿನ ಒಂದಿಲ್ಲೊಂದು ಲಾಭ ಪಡೆಯುವ ನಾವೆಲ್ಲರೂ ಪ್ರಕೃತಿ ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಿರ್ವಹಿಸೋಣ ಎಂದರು.

ಕೊವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿಯೇ ನಮಗೆ ಶುದ್ಧ ಗಾಳಿಯ ಬೆಲೆಯ ಅರಿವಾಗಿದೆ. ಪ್ರಕೃತಿಯಲ್ಲಿನ ಇಂತಹ ಶುದ್ಧ ಗಾಳಿ ನಮಗೆಲ್ಲ ಉಚಿತವಾಗಿ ದೊರೆಯುತ್ತದೆ. ಈ ಪ್ರಕೃತಿಯ ಋಣ ತೀರಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ. ಪ್ರಕೃತಿ ನಮಗೆ ಉಚಿತವಾಗಿ ಆಹಾರ, ಶುದ್ಧ ಗಾಳಿ ಮತ್ತು ವಾತಾವರಣ ನೀಡುತ್ತಿದೆ. ಅದನ್ನು ಉಳಿಸಿ, ಬೆಳೆಸುವ ಮಹತ್ತರ ಕಾರ್ಯಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾತನಾಡಿ, ನಮ್ಮ ಉತ್ತಮ ಭವಿಷ್ಯಕ್ಕಾಗಿ ತಮ್ಮ ತ್ಯಾಗ, ಬಲಿದಾನದ ಮೂಲಕ ಅರಣ್ಯ ಸಂರಕ್ಷಣೆ ಮಾಡಿದವರನ್ನು ನೆನೆಯೋಣ. ಅರಣ್ಯ ಸಂಪತ್ತು ಕೇವಲ ಮರಗಳು, ಪ್ರಾಣಿಗಳಷ್ಟೇ ಅಲ್ಲ. ಅರಣ್ಯ ಇಲ್ಲದೇ ಮಳೆಯೂ ಇಲ್ಲ, ಜೀವವೂ ಇಲ್ಲ, ಜೀವನವೂ ಇಲ್ಲ ಎಂಬುದನ್ನು ನಾವೆಲ್ಲರೂ ಅರಿತು ಸಂರಕ್ಷಣಾ ಕಾರ್ಯದಲ್ಲಿ ನಮ್ಮದೇ ಆದ ಕೊಡುಗೆ ನೀಡೋಣ ಎಂದರು.

ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಮುಖ್ಯ ಅತಿಥಿಗಳಿಂದ ಹಾಗೂ ವಿವಿಧ ರಂಗಗಳ ಪ್ರತಿನಿಧಿಗಳಿಂದ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಣೆ, ಮೌನಾಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ ಸಜ್ಜನರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಚಂದ್ರಹಾಸ ವೆರ್ಣೆಕರ್, ವಾರ್ತಾಧಿಕಾರಿ ವಸಂತ ಮಡ್ಲೂರ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಪ್ರಕಾರ ಪವಾಡಿಗೌಡ್ರ, ಮೇಘನಾ ಎಚ್., ವೀರೇಂದ್ರ ಮರಿಸಬಣ್ಣವರ, ಮಂಜುನಾಥ ಮೇಗಳಮನಿ, ರಾಮಪ್ಪ ಪೂಜಾರ, ಸ್ನೇಹಾ ಕೊಪ್ಪಳ, ವೀರಭದ್ರಪ್ಪ ಕುಂಬಾರ, ಅನ್ವರ ಕೊಲ್ಹಾರ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅರಣ್ಯ ಸಂರಕ್ಷಣೆಯಲ್ಲಿ ಅನೇಕರ ತ್ಯಾಗ, ಬಲಿದಾನ, ಸಮರ್ಪಣಾ ಮನೋಭಾವದಿಂದಾಗಿ ಇಂದು ಅರಣ್ಯಗಳು ಜೀವಂತವಾಗಿವೆ. ಅದಕ್ಕಾಗಿಯೇ ನಾವೆಲ್ಲರೂ ಜೀವಂತವಾಗಿದ್ದೇವೆ ಎಂಬುದನ್ನು ಮರೆಯಬಾರದು. ರಾಜ್ಯದಲ್ಲಿ 1966ರಿಂದ ಈವರೆಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದ 62 ನೌಕರರು ಹುತಾತ್ಮರಾಗಿದ್ದು, ಅವರೆಲ್ಲರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಬಿಂಕದಕಟ್ಟಿಯಲ್ಲಿ ಅರಣ್ಯ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಧನ್ಯವಾದಗಳನ್ನು ತಿಳಿಸಿದರು.

“ನಾವಿಂದು ಪರಿಸರ ಬದಲಾವಣೆಯಿಂದಾಗುವ ಅನಾಹುತಗಳನ್ನು ಎದುರಿಸುತ್ತಿದ್ದೇವೆ. ಪರಿಸರ ಸಂರಕ್ಷಣೆಯ ಕಾಳಜಿ ಹೊಣೆಗಾರಿಕೆಯನ್ನು ನಿಭಾಯಿಸುತ್ತಿಲ್ಲ. ಮನುಷ್ಯನನ್ನು ಬಿಟ್ಟು ಎಲ್ಲವನ್ನೂ ಸಹ ಪರಿಸರವೆಂದು ಪರಿಗಣಿತವಾಗುತ್ತದೆ. ಅಂತಹ ಪರಿಸರದ ಮೇಲೆ ಮಾನವನ ಅತಿಯಾದ ದುರಾಸೆಯಿಂದಾಗಿ ಹಾನಿ ಮಾಡುತ್ತಾ ಪ್ರಕೃತಿ ಅಸಮತೋಲನಕ್ಕೆ ಕಾರಣರಾಗಿದ್ದೇವೆ”
– ಸಿ.ಎನ್. ಶ್ರೀಧರ್,
ಜಿಲ್ಲಾಧಿಕಾರಿ, ಗದಗ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!