ಬೆಂಗಳೂರು (ನ.15): ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿಗೆ ಕಿರುಕುಳ ನೀಡಿದ ಆರೋಪ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅರವಿಂದ್ ರೆಡ್ಡಿಗೆ 2021ರಲ್ಲಿ ನಟಿಯ ಪರಿಚಯವಾಗಿದ್ದು ಈತ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಅರವಿಂದ ವೆಂಕಟೇಶ ರೆಡ್ಡಿ ಉದ್ಯಮಿಯಾಗಿದ್ದು, ಸಿನಿಮಾರಂಗದ ಜೊತೆ ಸಂಪರ್ಕ ಹೊಂದಿದ್ದಾರಂತೆ. ಈತ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿಯು ಗುರುತಿಸಿಕೊಂಡಿದ್ದಾನೆ ಎನ್ನಲಾಗ್ತಿದೆ.
ಬಂಧಿತ ಅರವಿಂದ ವೆಂಕಟೇಶ ರೆಡ್ಡಿ ಎವಿಆರ್ ಗ್ರೂಪ್ನ ಮಾಲೀಕನಾಗಿದ್ದಾರೆ. ಎಸಿಪಿ ಚಂದನ್ ಮತ್ತು ತಂಡದಿಂದ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದೆ.
ಅರವಿಂದ್ ನಟಿಯನ್ನು ಶ್ರೀಲಂಕ ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರಂತೆ. ಅಲ್ಲಿಂದ ನಟಿಗೆ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಪರಿಚಯವಾಗಿದೆ. ಬಳಿಕ ನಟಿ ಮೇಲೆ ಕಾಳಜಿ, ಪ್ರೀತಿ ತೋರಿದ್ದ. ನಂತರ ಆಗಸ್ಟ್ 22 ರಲ್ಲಿ ನಟಿ ಜೊತೆಗೆ ಅಂತರ ಕಾಯ್ದುಕೊಂಡಿದ್ದ ಎನ್ನಲಾಗ್ತಿದೆ.
ಅರವಿಂದ್ನ ಮಾನಸಿಕ ಸ್ಥಿತಿ, ಕುಡಿತದ ಚಟದ ಬಗ್ಗೆ ಅರಿತ ನಟಿಗ ಕೂಡ ಅಂತರ ಕಾಯ್ದುಕೊಂಡಿದ್ದರಂತೆ. ಆದರೆ ಬಲವಂತವಾಗಿ ನಟಿಯ ಹಿಂದೆ ಓಡಾಡ್ತಿದ್ದ ಅರವಿಂದ ರೆಡ್ಡ ಆಕೆಯ ಲೋಕೇಷನ್ ಟ್ರಾಕ್ ಮಾಡುವುದು, ಇನ್ಸ್ಟಾಗ್ರಾಮ್ ನಲ್ಲಿ ನಟಿಯ ಮಾರ್ಫ್ ಮಾಡಿದ ಫೋಟೋ ಪೋಸ್ಟ್ ಮಾಡ್ತಿದ್ದ ಎನ್ನಲಾಗ್ತಿದೆ.
ಮನೆ ಬಳಿ ಹುಡುಗರನ್ನು ಕಳಿಸಿ ನಟಿಯ ತಂದೆ-ತಾಯಿಗೆ ಬೆದರಿಕೆ ಹಾಕಿದ್ದನಂತೆ ಬಲವಂತದಿಂದ ಸಂಬಂಧ ಇಟ್ಟುಕೊಳ್ಳುವಂತೆ ಕಿರುಕುಳ ನೀಡಿದ್ದ ಎನ್ನಲಾಗ್ತಿದೆ. 2024ರ ಏಪ್ರಿಲ್ ತಿಂಗಳಿನಲ್ಲಿ ಅರವಿಂದ ಕಿರುಕುಳ ಹೆಚ್ಚಾಗಿದ್ದು ಇದರಿಂದ ನಟಿ ಅರವಿಂದ್ ವಿರುದ್ದ ದೂರು ನೀಡಿದ್ದರು.
ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಒದ್ದಾಡಿದ್ದ ನಟಿಗೆ ಕರೆ ಮಾಡಿ ಮನೆಗೆ ಬಾ, ನಾಳೆಯೇ ನಿನ್ನನ್ನ ಮದುವೆಯಾಗ್ತೀನಿ ಎಂದು ಬೆದರಿಸಿದ್ದ ಎನ್ನಲಾಗ್ತಿದೆ. ಕಿರುಕುಳಕ್ಕೆ ಬೇಸತ್ತು ನಟಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.
ಬಟ್ಟೆ ಹರಿದು ಅರೆಚಿತ್ತಲೆ ಮಾಡಿ ಹಿಂಸೆ ನೀಡಿದ ಆರೋಪವಿದೆ. ಒಂದು ವಾರದ ಬಳಿಕ ನಾನು ನೀಡಿದ್ದ ವಸ್ತು ವಾಪಸ್ಸು ಕೊಡುವಂತೆ ಹೇಳಿದ್ದ ಆರೋಪಿ ಒಂದು ಕೋಟಿ ಹಣಕ್ಕೂ ಡಿಮ್ಯಾಂಡ್ ಇಟ್ಟಿದ್ದ ಎನ್ನಲಾಗ್ತಿದೆ. ಜೂನ್ 14,2024 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ನಟಿ ದೂರು ನೀಡಿದ್ದರು ಎನ್ನಲಾಗ್ತಿದೆ.
2025 ರ ಆಕ್ಟೋಬರ್ 1 ಮತ್ತು 15 ರಂದು ನಟಿ ವಾಸವಿರುವ ಮನೆ ಮಾಲೀಕನಿಗೆ ಪತ್ರ ಬರೆದಿದ್ದ ಅರವಿಂದ್ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಳೆ ಎಂದು ಆರೋಪ ಮಾಡಿದ್ದ. ನಟಿಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದರಂತೆ. ಇದೆಲ್ಲದಕ್ಕೂ ವೆಂಕಟೇಶ್ ರೆಡ್ಡಿ ಎಂಬಾತನೇ ಕಾರಣ ಎಂದು ಅನುಮಾನ ವ್ಯಕ್ತಪಡಿಸಿ ನಟಿ ದೂರು ನೀಡಿದ್ರು.
ಆರೋಪಿ ಅರವಿಂದ ವೆಂಕಟೇಶ ರೆಡ್ಡಿ ಶ್ರೀಲಂಕಾಗೆ ತೆರಳುವ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು.ಇಂದು ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.


