ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಜಾರಿಗೆ ತಂದ ಯೋಜನೆಗಳು ಇಂದಿಗೂ ಪ್ರಸ್ತುತ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ದೇವರಾಜ್ ಅರಸು ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ 109ನೇ ಜನ್ಮದಿನಾಚರಣೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭೂ ಸುಧಾರಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ದೇಶದ ಮೊದಲ ಮುಖ್ಯಮಂತ್ರಿ ಡಿ. ದೇವರಾಜ ಅರಸು. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಶೋಷಿತರಿಗೆ ವಿಧಾನಸೌಧ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದ್ದರು ಎಂದು ಸ್ಮರಿಸಿದರು.
ಪ್ರಗತಿಪರ ಚಿಂತಕ ಸಾಹಿತಿ ಇಸ್ಮಾಯಿಲ್ ಎಲಿಗಾರ ದೇವರಾಜ್ ಅರಸು ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್.ಆರ್. ಗಂಗಪ್ಪ ಬ್ರಹ್ಮಶ್ರೀ ನಾರಾಯಣರ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿದರು,
ತಹಸೀಲ್ದಾರ ಬಿ.ವಿ. ಗಿರೀಶ ಬಾಬು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಹತ್ತಿಕಾಳ, ವಿಸ್ತರಣಾಧಿಕಾರಿ ಭೀಮಪ್ಪ, ನಿಲಯ ಪಾಲಕರಾದ ಬಿ.ಹೆಚ್. ಚಂದ್ರಪ್ಪ, ಜುಂಜಪ್ಪ, ವೀರೇಶ, ಸುನಿಲ, ಪ್ರೇಮಾವತಿ, ಶ್ರುತಿ, ಅನ್ನಪೂರ್ಣ, ಶಿಕ್ಷಕ ಮೇಘರಾಜ, ಹೇಮಣ್ಣ ಮೋರಗೇರಿ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ, ತೋಟಗಾರಿಕೆ ಇಲಾಖೆಯ ರವೀಂದ್ರ ಸಿದ್ದೇಶ, ಅಶೋಕ ಮುಂತಾದವರಿದ್ದರು.