ಮೈಸೂರು: ಮಾಜಿ ಸಚಿವ ಬಿ. ಶ್ರೀರಾಮುಲು ಬಿಜೆಪಿ ಬಿಟ್ಟು ಕಾಂಗ್ರೆಸ್ʼಗೆ ಹೋಗುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಕಲಹ ಬಿಜೆಪಿಯ ಆಂತರಿಕ ಕಲಹ. ಮಾಜಿ ಸಚಿವ ಬಿ. ಶ್ರೀರಾಮುಲು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದರು.
ಇನ್ನೂ ಇಬ್ಬರ ಜಗಳವನ್ನು ಬಿಜೆಪಿಯ ನಾಯಕರೇ ಕುಳಿತು ಪರಿಹರಿಸಬೇಕು. ಇಬ್ಬರು ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು. ಅಣ್ಣ- ತಮ್ಮಂದಿರಕ್ಕಿಂತ ಚೆನ್ನಾಗಿದ್ದವರು. ಶ್ರೀರಾಮುಲು ನನ್ನ ಅಭಿಪ್ರಾಯದಲ್ಲಿ ಕಾಂಗ್ರೆಸ್ ಗೆ ಹೋಗುವುದಿಲ್ಲ. ಈ ಬಗ್ಗೆ ನಾನು ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದು ತಿಂಗಳಿನಿಂದ ಈ ಸಮಸ್ಯೆ ಇದೆ. ಜನರು ಹಳ್ಳಿ ಹಳ್ಳಿಯನ್ನ ಬಿಟ್ಟು ಹೋಗುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ. ಮೈಕ್ರೋ ಫೈನಾನ್ಸ್ ಜನ ಸಾಮಾನ್ಯರ ಮೇಲೆ ಕಿರುಕುಳ ಕೊಡುತ್ತಿದ್ದಾರೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.