ರಾಯಚೂರು: ಮಾಜಿ ಸಚಿವ ಕೆ. ಶಿವನಗೌಡ ನಾಯಕ್ ಅವರು ತಮ್ಮ ಜನ್ಮದಿನದ ಸಂದರ್ಭ ನವಿಲುಗರಿಯ ಹಾರ ಧರಿಸಿ ವೈರಲ್ ಆಗಿರುವ ಫೋಟೋಗಳ ಹಿನ್ನೆಲೆಯಲ್ಲಿ ವಿವಾದಕ್ಕೆ ಒಳಗಾಗಿದ್ದಾರೆ. ಜುಲೈ 14 ರಂದು ನಡೆದ ಈ ಘಟನೆ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಆರೋಪ ಎದುರಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇಮೇಲ್ ಮೂಲಕ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದು, ನವಿಲು ರಾಷ್ಟ್ರಪಕ್ಷಿಯಾಗಿರುವುದರಿಂದ ಅದರ ಗರಿಗಳನ್ನು ಬಳಸುವುದು ಕಾನೂನುಬದ್ಧವಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿ ಇತರರು ಕೂಡ ಪ್ರೇರಿತರಾಗುವ ಅಪಾಯವಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನ ಮಾಜಿ ಸಚಿವ ಶಿವನಗೌಡ ನಾಯಕ್ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನವಿಲು ಗರಿಯ ಮೂಲ ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.



