ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ದಿಢೀರ್ ನಾಪತ್ತೆಯಾಗಿದ್ದು, ಕೂಳೂರಿನ ಫಲ್ಗುಣಿ ನದಿ ಸೇತುವೆಯ ಮೇಲೆ ಅಪಘಾತವಾದ ಸ್ಥಿತಿಯಲ್ಲಿ ಅವರ ಕಾರು ಪತ್ತೆಯಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಮನೆಯಿಂದ ಕಾರು ಚಲಾಯಿಸಿಕೊಂಡು ಹೋಗಿದ್ದರು ಎನ್ನಲಾಗಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಮೇಲೆ ಮುಮ್ತಾಜ್ ಅಪಘಾತ ನಡೆದ ಸ್ಥಿತಿಯಲ್ಲಿ ಬಿಎಂಡಬ್ಲ್ಯು ಕಾರು ಪತ್ತೆಯಾಗಿದೆ. ಅಪಘಾತವಾಯ್ತ? ಅಥವಾ ಆತ್ಮಹತ್ಯೆ ಮಾಡಿಕೊಂಡರಾ? ನಿಗೂಢವಾಗಿದೆ.
ಘಟನೆ ಬಳಿಕ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದರು. ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೊಯಿದ್ದೀನ್ ಬಾವ ನಾಪತ್ತೆಯಾದ ಸಹೋದರನ ನೆನದು ಕಣ್ಣೀರು ಹಾಕಿದರು. ಅಪಘಾತವಾಗಿ ನದಿಯಲ್ಲಿ ಬಿದ್ದಿರುವ ಸಾಧ್ಯತೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿರುವ ಎನ್‌ಡಿಆರ್‌ಎಫ್ ಅಗ್ನಿ ಶಾಮಕದಳದಿಂದ ಹುಡುಕಾಟ ಮುಂದುವರಿಸಿದ್ದಾರೆ.