ಬೆಂಗಳೂರು: ಯಲಹಂಕ ಉಪನಗರದ ಮುನೇಶ್ವರ ಬಡಾವಣೆಯಲ್ಲಿ ಮಾಜಿ ನಗರಸಭೆ ಸದಸ್ಯನ ಕಚೇರಿಯಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಕಳ್ಳತನ ಪ್ರಕರಣವನ್ನು ಯಲಹಂಕ ಉಪನಗರ ಪೊಲೀಸರು ಭೇದಿಸಿದ್ದಾರೆ.
ಮಾಜಿ ನಗರಸಭೆ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ರಾಮಚಂದ್ರಚಾರಿ ಕಚೇರಿಯ ಲಾಕರ್‌ನಿಂದ ಸುಮಾರು 10 ಲಕ್ಷ ರೂಪಾಯಿ ಹಣ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಆಶೋಕ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ, ಆರೋಪಿ ಕಳೆದ ಮೂರು ವರ್ಷಗಳಿಂದ ಕಳ್ಳತನವನ್ನೇ ಜೀವನೋಪಾಯವಾಗಿ ಮಾಡಿಕೊಂಡಿದ್ದಾನೆ ಎಂಬುದು ಬಹಿರಂಗವಾಗಿದೆ. ಆರೋಪಿ ಪ್ರತಿದಿನ ಗೋಬಿ ತಿನ್ನಲು ಕಚೇರಿಯ ಬಳಿ ಬರುತ್ತಿದ್ದ ವೇಳೆ, ಕಚೇರಿ ಕೀ ಇಡುವ ಸ್ಥಳವನ್ನು ಗಮನಿಸಿದ್ದಾನೆ.
ಇತ್ತೀಚೆಗೆ ಕಚೇರಿಯಲ್ಲಿ ಹೆಚ್ಚಿನ ಹಣ ಇಡಲಾಗಿದೆ ಎಂಬ ಮಾಹಿತಿ ದೊರೆತ ಕೂಡಲೇ, ಯಾರಿಗೂ ತಿಳಿಯದಂತೆ ಕಚೇರಿ ಬೀಗ ತೆರೆದು ಹಣ ಕಳ್ಳತನ ಮಾಡಿದ್ದಾನೆ. ಕದ್ದ ಹಣವನ್ನು ತನ್ನ ಅಣ್ಣನ ಆಸ್ಪತ್ರೆ ಚಿಕಿತ್ಸಾ ಖರ್ಚಿಗೆ ಬಳಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



