ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅವರ ಸಹೋದರಿ ಜವರಮ್ಮ ಅವರು ಇಂದು ನಿಧನರಾಗಿದ್ದಾರೆ. 88 ವರ್ಷದ ಜವರಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಜವರಮ್ಮ ಅವರ ನಿಧನದಿಂದ ಕುಟುಂಬದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ. ತಂಗಿಯ ಅಗಲಿಕೆಗೆ ದೇವೇಗೌಡರು ಕಂಬನಿ ಮಿಡಿದಿದ್ದಾರೆ. ಅವರ ಅಂತ್ಯ ಸಂಸ್ಕಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಸವನಾಯಕನಹಳ್ಳಿಯಲ್ಲಿ ನೆರವೇರಿತು.
ಇನ್ನೂ, ಜವರಮ್ಮ ಅವರು ದೇವೇಗೌಡರ ಮಗಳಾದ ಅನುಸೂಯ ಅವರನ್ನು ತಮ್ಮ ಮಗನಿಗೆ ವಿವಾಹ ಮಾಡಲು ಹಿಂದೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ, ದೇವೇಗೌಡರ ಮದುವೆಯ ನಂತರ ಆ ಪ್ರಸ್ತಾಪ ಮುರಿದುಬಿದ್ದ ಹಿನ್ನೆಲೆಯಲ್ಲಿ, ಸಹೋದರ–ಸಹೋದರಿಯ ನಡುವೆ ವೈಮನಸ್ಸು ಉಂಟಾಯಿತು ಎಂದು ಮೂಲಗಳು ತಿಳಿಸಿವೆ.



