ಗ್ರಾಮಗಳ ಸ್ವಚ್ಛತೆಗೆ ಪಾಕ್ಷಿಕ ಕಾರ್ಯಕ್ರಮ

0
Fortnightly program for cleaning villages
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮಗಳ ಪರಿಸರ ಆರೋಗ್ಯವಾಗಿದ್ದರೆ ಗ್ರಾಮಸ್ಥರ ಆರೋಗ್ಯ ಸದೃಢವಾಗಿರುತ್ತದೆ. ಗ್ರಾಮಗಳ ಪರಿಸರವೇ ಮಲೀನತೆಯಿಂದ ಇದ್ದರೆ ಆ ಗ್ರಾಮದ ಗ್ರಾಮಸ್ಥರೆಲ್ಲ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 2ರವರೆಗೆ ನರಗುಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲೂ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ತಿಳುವಳಿಕೆ ಮೂಡಿಸುವ ಕಾರಣದಿಂದ `ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024’ರ ಆಂದೋಲನ ಮೂಲಕ ತರಹೇವಾರಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.

Advertisement

ನರಗುಂದ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳು ಅಭಿವೃದ್ಧಿಯಾದರೆ ನಾಡೆಲ್ಲ ಅಭಿವೃದ್ಧಿ ಎಂಬಂತೆ ನಾವು ಮೊದಲು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು. ಗ್ರಾಮಗಳ ಅಭಿವೃದ್ಧಿ ದೃಷ್ಟಿಕೋನದಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನದಲ್ಲಿ ತಾಲೂಕಿನ ಗ್ರಾಮ ಪಂಚಾಯತ ವ್ಯಾಪ್ತಿಗಳಲ್ಲಿ ಗ್ರಾಮದ ಪ್ರವಾಸಿ ತಾಣಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಿ ಗ್ರಾಮದ ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಗ್ರಾಮದ ಕೆರೆ ಸುತ್ತ-ಮುತ್ತ, ಶಾಲಾ-ಕಾಲೇಜುಗಳ ಆವರಣ, ಆರೋಗ್ಯ ಕೇಂದ್ರಗಳು, ಸರ್ಕಾರಿ ಕಟ್ಟಡಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸುವ ಮೂಲಕ ಪರಿಸರ ಸಂರಕ್ಷಣೆ ಜೊತೆಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು. ಶಾಲಾ-ಕಾಲೇಜುಗಳಲ್ಲಿ ತ್ಯಾಜ್ಯದಿಂದ ಕಲಾಕೃತಿ ರಚಿಸುವ ಹಾಗೂ ಚಿತ್ರಕಲೆ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಿ ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿ ಸ್ಪರ್ಧೆಯಲ್ಲಿ ಅತ್ಯುತ್ತಮವಾದ ಕಲಾಕೃತಿಗಳಿಗೆ ಬಹುಮಾನ ನೀಡಲಾಗುವುದು. ಈ ಮೂಲಕ ಗ್ರಾಮಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಸಂಪತ್ತು ಮಾಡುವ ಕುರಿತು ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಜಿಪಿಎಲ್‌ಎಫ್ ಸದಸ್ಯರ ಮೂಲಕ ಅರಿವು ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಅಂತ ತಿಳಿಸಿದರು.

ಸ್ವಚ್ಛತಾ ಹೀ ಸೇವಾ ಅಭಿಯಾನದ ಅವಧಿಯಲ್ಲಿ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯ ಕೇಂದ್ರಗಳು, ಪಂಚಾಯತಿ ಕಚೇರಿಗಳು, ಶಾಲಾ-ಕಾಲೇಜು, ಬಸ್ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಮುದಾಯ ಶೌಚಾಲಯ ಬಳಕೆ ಮಾಡುವಂತೆ ಉತ್ತೇಜಿಸುವ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶ್ರಮದಾನ ಕಾರ್ಯಕ್ರಮ ಆಯೋಜಿಸುವುದು ಮತ್ತು ಸ್ವಚ್ಛತಾ ಕಾರ್ಮಿಕರಿಗೆ ವಿವಿಧ ಇಲಾಖೆಯಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಸೇರಿ ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

 


Spread the love

LEAVE A REPLY

Please enter your comment!
Please enter your name here