ವಿಜಯಸಾಕ್ಷಿ ಸುದ್ದಿ,ಗದಗ: ಕುಕನೂರು–ಮುಂಡರಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಂಡಲಗಿರಿ ಗ್ರಾಮದಲ್ಲಿ, ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸರ್ಕಾರಕ್ಕೆ ದಾನ ನೀಡಿದ 2.5 ಎಕರೆ ಜಮೀನಿನಲ್ಲಿ ನಿರ್ಮಾಣಗೊಳ್ಳಲಿರುವ ಬುದ್ಧ–ಬಸವ–ಅಂಬೇಡ್ಕರ್ ಸಂಕೀರ್ಣದಡಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ಸಾರ್ವಜನಿಕ ಸಮುದಾಯಭವನಕ್ಕೆ ಶಂಕುಸ್ಥಾಪನೆ ನೆರವೇರಿತು.
ಈ ಭವನವು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಶಂಕುಸ್ಥಾಪನೆಯನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಹಣಕಾಸು ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ವಹಿಸಿದ್ದರು.
ಈ ವೇಳೆ ಮಾತನಾಡಿದ ರಾಯರಡ್ಡಿ ಅವರು, ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕಾಗಿದ್ದ ಯಲಬುರ್ಗಾ ಇಂದು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂದರು. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, ಹೆಸರು, ಉಪ್ಪು ಮತ್ತು ಸಕ್ಕರೆ ನೀಡುವ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ತಿಳಿಸಿದರು.
ತಾಲೂಕಿನ ಪ್ರತಿಹೋಬಳಿಗೂ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ತಳಕಲ್ಲಿನ ಇಂಜಿನಿಯರಿಂಗ್ ಕಾಲೇಜು ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಇಟಗಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸಿ, ಅದಕ್ಕೆ ಮಹಾದೇವ ದೇವಾಲಯದ ಹೆಸರಿಡಲಾಗುವುದು ಎಂದು ಘೋಷಿಸಿದರು. ಜೊತೆಗೆ ಕೊಪ್ಪಳ ಜಿಲ್ಲೆಗೆ 300 ಕೋಟಿ ವೆಚ್ಚದ ಹೃದಯ ಮತ್ತು ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಸರ್ಕಾರವನ್ನು ಮನವೊಲಿಸುವ ಭರವಸೆ ನೀಡಿದರು.
ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಬಸವರಾಜ ರಾಯರಡ್ಡಿಯವರ ಜನಪರ ಕಾರ್ಯಗಳನ್ನು ಶ್ಲಾಘಿಸಿ, ಜನಸೇವೆಯಲ್ಲೇ ದೇವರನ್ನು ಕಾಣುವ ನಾಯಕರು ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸುರೇಶ್ ಹಿಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ವಿವಿಧ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು, ವಿದ್ಯಾಪೀಠದ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಂಡಲಗಿರಿ – ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಮುದಾಯಭವನ – ₹8 ಕೋಟಿ, ಇಟಗಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ 500 ವಿದ್ಯಾರ್ಥಿಗಳ ಹಾಸ್ಟೆಲ್, ಇಟಗಿ ಆದರ್ಶ ಪಿಯು ಕಾಲೇಜು – ₹4 ಕೋಟಿ, ಇಟಗಿ ಗ್ರಾಮದಲ್ಲಿ ಬಸ್ ನಿಲ್ದಾಣ., ಮಂಡಲಗಿರಿಯಲ್ಲಿ ಆಧುನಿಕ ಬಸ್ ನಿಲ್ದಾಣ – ₹2 ಕೋಟಿ, ಮಂಡಲಗಿರಿ–ಮಾಳೆಕೊಪ್ಪ ಸಂಪರ್ಕ ರಸ್ತೆ – ₹1 ಕೋಟಿ



