ವಿಜಯಸಾಕ್ಷಿ ಸುದ್ದಿ, ಗದಗ : 50 ಹಾಸಿಗೆಗಳ ತೀವ್ರ ನಿಗಾ ಘಟಕ ಗದಗ ಜಿಮ್ಸ್ ಆಸ್ಪತ್ರೆಗೆ ಸೇರ್ಪಡೆ ಆಗುವ ಮೂಲಕ ಈ ಭಾಗದ ಸಾರ್ವಜನಿಕರ ಬಹುದಿನಗಳ ನಿರೀಕ್ಷೆ ಸಾಕಾರವಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ರವಿವಾರ 50 ಹಾಸಿಗೆಗಳ ತೀವ್ರ ನಿಗಾ ಘಟಕ, ಜಿಲ್ಲಾ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಕಟ್ಟಡ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಹಾಗೂ ಅತ್ಯಾಧುನಿಕ ಅಂಬ್ಯುಲೆನ್ಸ್ ಲೋಕಾರ್ಪಣೆ ಮತ್ತು ನೂತನ ಡಯಾಲಿಸಿಸ್ ಘಟಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತೀವ್ರ ನಿಗಾ ಘಟಕ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತುಂಬಾ ಸಹಕಾರ ನೀಡಿದ್ದಾರೆ. ಈ ಘಟಕ ಅಂದಾಜು 20 ಕೋಟಿ ರೂಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಮುಂದಿನ 15 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಸೂಚಿಸಿದರು.
ಈ ತೀವ್ರ ನಿಗಾ ಘಟಕದಿಂದ ಈ ಭಾಗದ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕಿಡ್ನಿ ರೋಗಿಗಳಿಗೆ, ಹೃದಯ ಸಂಬಂಧಿ ರೋಗಿಗಳಿಗೆ, ಹಾವು ಕಡಿತ ಹಾಗೂ ರಸ್ತೆ ಅಪಘಾತ ಸಂದರ್ಭದಲ್ಲಿ ರೋಗಿಗಳ ಜೀವ ಸಂರಕ್ಷಣೆಗೆ ಅತ್ಯಂತ ಸಹಕಾರಿಯಾಗಲಿದೆ ಎಂದರು.
ಜಿಲ್ಲಾಸ್ಪತ್ರೆಯ ಸ್ವಚ್ಛತೆ ಕುರಿತು ಕಳೆದ ಆರು ತಿಂಗಳಿಂದ ಯಾವುದೇ ತರಹದ ಸಾರ್ವಜನಿಕರ ದೂರುಗಳು ಬಂದಿಲ್ಲ. ಇದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಶ್ರಮದಾನ ಕಾರಣವಾಗಿದೆ ಎಂದು ತಿಳಿದುಬಂದಿದ್ದು, ಸಂತಸದ ವಿಷಯ. ದವಾಖಾನೆಗಳು ಸ್ವಚ್ಛವಾಗಿದ್ದರೆ ಅವುಗಳನ್ನು ದೇವಸ್ಥಾನಗಳು ಎಂದು ಜನಸಾಮಾನ್ಯರು ಭಾವಿಸುತ್ತಾರೆ. ಆ ತರಹದ ಮನೋಭಾವನೆ ಸ್ವಚ್ಛತೆಯಿಂದ ಮಾತ್ರವೇ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಅಸುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾಜುದ್ದೀನ ಹ.ಓಲೇಕಾರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಪಿ.ಬೊಮ್ಮನಹಳ್ಳಿ, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಂಶುಪಾಲ ಡಾ. ರಾಜು ಜಿ. ಎಮ್, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧೀಕ್ಷಕ ಡಾ. ರೇಖಾ ಎಸ್.ಸೋನಾವನೆ, ಜಿಲ್ಲಾ ಶಸ್ತçಚಿಕಿತ್ಸಕರು ಡಾ. ಬಿ.ಸಿ. ಕರಿಗೌಡರ, ಡಿಎಚ್‌ಓ ಡಾ. ಎಸ್.ಎಸ್. ನೀಲಗುಂದ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ ಮಾತನಾಡಿ, ಗದಗ ಜಿಮ್ಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೀರಿ. ನಿಮ್ಮ ಸೇವೆಯನ್ನು ಮರೆಯಲಾಗದು. ಜಿಮ್ಸ್ ಆಸ್ಪತ್ರೆ ಈ ಮಟ್ಟದ ಅಭಿವೃದ್ಧಿ ಹೊಂದಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ್ ಅವರ ಕಾಳಜಿ, ಕಳಕಳಿ ಅಪಾರವಾಗಿದೆ ಎಂದರು.