ನಾಲಂದಾ: ಬೌದ್ಧ ಮತ್ತು ಜೈನರಿಗೆ ಪವಿತ್ರವೆನಿಸಿದ ಬಿಹಾರದ ರಾಜಗೀರ್‌ನಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲವು ಅನುಮಾನಗಳನ್ನು ಮೂಡಿಸಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಾಯಿ, ಮಗ ಮತ್ತು ಇಬ್ಬರು ಪುತ್ರಿಯರು ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಈ ನಾಲ್ವರು ನೇಪಾಳ ಪ್ರವಾಸ ಮುಗಿಸಿ ಜ.30ರಂದು ರಾಜಗೀರ್‌ಗೆ ಆಗಮಿಸಿ ಕೊಠಡಿ ಬುಕ್ ಮಾಡಿಕೊಂಡಿದ್ದರು. ಬಳಿಕ ನಾಲಂದಾದ ಪಾವಾಪುರಿಗೆ ತೆರಳುವ ಯೋಜನೆ ಹೊಂದಿದ್ದರು. ಆದರೆ, ಮೂರು ದಿನಗಳ ಕಾಲ ಕೊಠಡಿಯಿಂದ ಯಾರೂ ಹೊರಬಂದಿರಲಿಲ್ಲ.
ಶುಕ್ರವಾರ ಬೆಳಿಗ್ಗೆ ಕೊಠಡಿಯಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಮ್ಯಾನೇಜರ್ ಮಾಹಿತಿ ನೀಡಿದ ಬಳಿಕ, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ನಾಲ್ಕೂ ಶವಗಳು ಒಂದೇ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸ್ಥಳದಿಂದ ನಿದ್ರೆ ಮಾತ್ರೆಗಳ ದೊಡ್ಡ ಪ್ರಮಾಣ ಪತ್ತೆಯಾಗಿರುವುದು ಆತ್ಮಹತ್ಯೆಗೂ ಮುನ್ನ ಮದ್ದು ಸೇವಿಸಿರಬಹುದೆಂಬ ಶಂಕೆ ಮೂಡಿಸಿದೆ. ಮೃತರಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳು ಹಾಗೂ ನಗದು ಹಣ ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದ ತನಿಖೆಗಾಗಿ ನಾಲಂದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ. ಜೊತೆಗೆ ಕರ್ನಾಟಕದ ಗುಬ್ಬಿಗೆ ಇಬ್ಬರು ಪೊಲೀಸರ ತಂಡವನ್ನು ಕಳುಹಿಸಲಾಗಿದೆ.
ರಾಜಗೀರ್ ಪೊಲೀಸರು, “ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಗುಬ್ಬಿ ಪೊಲೀಸರ ಸಹಕಾರದೊಂದಿಗೆ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಎಲ್ಲಾ ಶವಗಳನ್ನು ಬಿಹಾರ್ ಶರೀಫ್‌ನ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವೈದ್ಯಕೀಯ ಮಂಡಳಿಯಿಂದ ವೀಡಿಯೊಗ್ರಫಿಯೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ” ಎಂದು ತಿಳಿಸಿದ್ದಾರೆ.



