ದಾವಣಗೆರೆ:- ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮಕ್ಕಳು, ಜನಸಾಮಾನ್ಯರು ಓಡಾಡಲು ಭಯ ಪಡುವಂತೆ ಮಾಡಿದೆ.
ಈ ನಡುವೆ ನಗರದ ಶಾಸ್ತ್ರಿ ಲೇಔಟ್ನಲ್ಲಿ ದುರಂತ ಒಂದು ನಡೆದಿದ್ದು, ಬೀದಿ ನಾಯಿ ದಾಳಿಗೊಳಗಾಗಿದ್ದ ನಾಲ್ಕು ವರ್ಷದ ಬಾಲಕಿ ರೇಬೀಸ್ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾಳೆ. ನಾಲ್ಕೈದು ತಿಂಗಳ ಹಿಂದೆ ಇಲ್ಲಿನ 4 ವರ್ಷದ ಖದೀರಾ ಬಾನು ಎಂಬ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಾಗ ಬೀದಿನಾಯಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಪೋಷಕರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಗೊಂಡಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಗುಣಮುಖಳಾಗಿದ್ದ ಬಾಲಕಿ, ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡಿದ್ದಾಳೆ. ಆಗ ಪೋಷಕರು ಮತ್ತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ, ರೇಬೀಸ್ ಕಾಯಿಲೆಯಿಂದ ಮಗಳು ಸಾವನ್ನಪ್ಪಿದ್ದಾಳೆ.
ರೇಬೀಸ್ ಕಾಯಿಲೆಗೆ ತುತ್ತಾಗಿದ್ದ ಬಾಲಕಿ ಖದೀರಾ ಬಾನುಗೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ನೀಡಿದ ವೈದ್ಯರು ಬಾಲಕಿ ಜೀವ ಉಳಿಸಲು ಎಷ್ಟೇ ಪ್ರಯತ್ನಪಟ್ಟರು ಭಾನುವಾರ ರಾತ್ರಿ ಆಸ್ಪತ್ರೆಯಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಮಗಳನ್ನು ಉಳಿಸಿಕೊಳ್ಳಲು 8 ರಿಂದ 9 ಲಕ್ಷ ರೂಪಾಯಿ ಖರ್ಚು ಮಾಡಿದರೂ ಸಾಧ್ಯವಾಗಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು.
ಇನ್ನೂ ಇಲ್ಲಿನ ಜನಸಾಮಾನ್ಯರು ಬೀದಿ ನಾಯಿ ಹಾವಳಿಗೆ ಕಡಿವಾಣ ಹಾಕಿ ಎಂದು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್ ಬಿದ್ದಿಲ್ಲ. ಪ್ರಾಣಿ ಧಯಾ ಸಂಘದ ಮಕ್ಕಳಿಗೆ ಈ ರೀತಿ ಆಗಿದ್ರೆ ಏನು ಮಾಡುತ್ತಿದ್ದರು. ನಮ್ಮ ಮಗುವಿಗಾದ ಗತಿ ಬೇರೆಯವರಿಗಾಗಬಾರದು ಎಂದು ಪೋಷಕರು ಮನವಿ ಮಾಡ್ತಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.